ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ 3.44 ಲಕ್ಷ ರೂ ಹಣ ಪಡೆದವ ಗೋವಾಗೆ ಪರಾರಿಯಾಗಿದ್ದು, ಹಣ ಮರಳಿ ಕೇಳಿದವರಿಗೆ ಜೀವ ಬೆದರಿಕೆ ಒಡ್ಡಿದ್ದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಅಮದಳ್ಳಿಯ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ ವ್ಯಕ್ತಿ. ಗೋವಾದ ಮಡಗಾಂವ್ ಬಳಿಯ ಪಾಂಜಿಪೊoಡಾದಲ್ಲಿರುವ ಈತ ಹಳಗಾದ ಜೊನಿ ಡಿಸೋಜಾ ಹಾಗೂ ಅಜಯ ಚಂದ್ರಕಾoತ ನಾಯ್ಕ ಅವರಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದ. ಇದಕ್ಕಾಗಿ ಅವರಿಂದ 3.44 ಲಕ್ಷ ರೂ ಹಣವನ್ನು ಪಡೆದಿದ್ದ. ಆದರೆ, ಕೆಲಸವನ್ನು ಮಾತ್ರ ಕೊಡಿಸಿರಲಿಲ್ಲ.
ಕೆಲಸ ಕೊಡಿಸುವಂತೆ ಜೊನಿ ಡಿಸೋಜಾ ಹಾಗೂ ಅಜಯ ನಾಯ್ಕ ದುಂಬಾಲು ಬಿದ್ದಾಗ ನಕಲಿ ನೇಮಕಾತ್ರಿ ಆದೇಶ ನೀಡಿದ್ದ. ವಿದೇಶದಲ್ಲಿ ಉದ್ಯೋಗದ ಕಥೆ ಕಟ್ಟಿದ್ದ. ಆದರೆ, ಎಷ್ಟು ಕೇಳಿಕೊಂಡರೂ ಉದ್ಯೋಗವನ್ನು ಮಾತ್ರ ದೊರಕಿಸಿಕೊಟ್ಟಿರಲಿಲ್ಲ. ಯಾವುದೇ ಉದ್ಯೋಗ ಕೊಡಿಸದೇ ಮೋಸ ಮಾಡಿದ ಬಗ್ಗೆ ನಿರುದ್ಯೋಗಿಗಳಿಬ್ಬರು ಗರಂ ಆಗಿದ್ದರು.
`ತಮ್ಮ ಹಣವನ್ನು ತಮಗೆ ಮರಳಿಸು’ ಎಂದು ಜೊನಿ ಡಿಸೋಜಾ ಹಾಗೂ ಅಜಯ ನಾಯ್ಕ ಆರೋಪಿ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ ಬಳಿ ಕೇಳಿಕೊಂಡಿದ್ದರು. ಆದರೆ, `ಹಣವನ್ನು ಮರಳಿಸಲ್ಲ. ಉದ್ಯೋಗವನ್ನು ಕೊಡಿಸಲ್ಲ’ ಎಂದ ಆರೋಪಿ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ `ಮತ್ತೆ ಹಣ ಕೇಳಿದರೆ ಖಂಡಿತ ನಿಮ್ಮನ್ನ ಬಿಡುವುದಿಲ್ಲ’ ಎಂದು ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.