ನಾಲ್ಕು ತಿಂಗಳ ಹಿಂದೆ ಪೂಜಾರನ್ನು ವರಿಸಿದ್ದ ಗಂಗಾಧರ ಶನಿವಾರ ಸಂಜೆ ಶಿರಸಿ ಬಸ್ಸಿನಲ್ಲಿ ಕೊಲೆಯಾಗಿದ್ದು, ಕೊಲೆ ಮಾಡಿದ ಪ್ರೀತಂ ಡಿಸೋಜಾ’ರನ್ನು ಪೊಲೀಸರು 30 ನಿಮಿಷದ ಒಳಗೆ ಬಂಧಿಸಿದ್ದಾರೆ. ಪ್ರೀತಂ ಹಾಗೂ ಪೂಜಾ ನಡುವಿನ ಹಳೆಯ ಪ್ರೇಮ ಪುರಾಣ ಗಂಗಾಧರ ಅವರ ಕೊಲೆಗೆ ಕಾರಣ ಎಂಬ ಮಾತುಗಳು ದಟ್ಟವಾಗಿದೆ.
ಪೂಜಾ ಹಾಗೂ ಪ್ರೀತಂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಪೂಜಾ ಅವರು ಪ್ರೀತಂ ಪ್ರೀತಿ ನಿರಾಕರಿಸಿದ್ದರು. ಬೆಂಗಳೂರಿನಲ್ಲಿ ಪರಿಚಯವಾಗಿದ್ದ ಸಾಗರದ ಗಂಗಾಧರ ಅವರನ್ನು ವರಿಸಿದ್ದರು. ಇದರಿಂದ ಸಿಟ್ಟಾಗಿದ್ದ ಪ್ರೀತಂ ನೂತನ ದಂಪತಿ ಅಚನಳ್ಳಿಯ ಸಂಬoಧಿಕರ ಮನೆಗೆ ಬಂದಿದ್ದರನ್ನು ಅರಿತಿದ್ದರು. ಅವರು ಮರಳುವಾಗ ಬೆಂಗಳೂರಿಗೆ ಚಲಿಸುತ್ತಿದ್ದ ಬಸ್ಸು ಏರಿ ಗಂಗಾಧರ ಅವರ ಎದೆಗೆ ಚಾಕು ಇರಿದಿದ್ದು, ಆಸ್ಪತ್ರೆ ಸೇರುವ ಮುನ್ನವೇ ಗಂಗಾಧರ ಕೊನೆ ಉಸಿರೆಳೆದರು. ಈ ವೇಳೆ ಪೂಜಾ ಅವರ ಕೈಗೆ ಸಹ ಪ್ರೀತಿಂ ಚಾಕು ತಾಗಿಸಿದ್ದಾರೆ.
ಪ್ರಕರಣಕ್ಕೆ ಹೊಸ ತಿರುವು
ಕೊಲೆ ನಂತರ ಬಸ್ಸಿನಿಂದ ಹಾರಿ ಪರಾರಿಯಾಗಿದ್ದ ಪ್ರೀತಂ’ರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪೂಜಾ ಅವರ ಕುಮ್ಮಕ್ಕಿನಿಂದಲೇ ಗಂಗಾಧರ ಅವರ ಕೊಲೆ ನಡೆದಿದೆ ಎಂದು ಗಂಗಾಧರ ಅವರ ಕುಟುಂಬದವರು ದೂರಿದ್ದಾರೆ.
ಶಿರಸಿಗೆ ಧಾವಿಸಿದ ಗಂಗಾಧರ ಅವರ ಕುಟುಂಬದವರು ಕೊಲೆಯ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. `ಪ್ರೀತಂ ಹಾಗೂ ಪೂಜಾ ನಡುವೆ ಪ್ರೀತಿ ಇದ್ದ ವಿಚಾರ ಕುಟುಂಬದವರಿಗೆ ಗೊತ್ತಿತ್ತು. ಆದರೆ, ಮದುವೆ ಆದ ನಂತರ ಪ್ರೀತಂ’ರನ್ನು ಮರೆತಿರುವುದಾಗಿ ಪೂಜಾ ಹೇಳಿದ್ದು, ಅದೆಲ್ಲವೂ ಸುಳ್ಳು ಎಂದು ಇದೀಗ ಅರಿವಾಗಿದೆ’ ಎಂದು ಗಂಗಾಧರ ಅವರ ಸಹೋದರ ಸಂತೋಷ್ ಹೇಳಿದ್ದಾರೆ.