ಕುಮಟಾ: ಹಿಮಾಚಲ ಪ್ರದೇಶದ ನೂರಾರು ಭಕ್ತರು ಬುಧವಾರ ಕಾಳಿಕಾ ದೇವಿ ಮೆರವಣಿಯೊಂದಿಗೆ ಗೋಕರ್ಣದಲ್ಲಿ ಸಂಚರಿಸಿದ್ದು, ರಥಬೀದಿ ಮೂಲಕ ಕಡಲತೀರಕ್ಕೆ ತೆರಳಿ ಸಮುದ್ರ ಸ್ನಾನ ಮಾಡಿದರು.
ಅದಾದ ಮೇಲೆ ಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿ ಆತ್ಮಲಿಂಗ ದರ್ಶನ ಪಡೆದರು. ಮೆರವಣಿಗೆಯ ಉದ್ದಕ್ಕೂ ಭಜನೆ-ನೃತ್ಯದ ಮೂಲಕ ಗಮನ ಸೆಳೆದರು.
ಬಾಲಕಿ ಬದುಕಿಗೆ ಪೊಲೀಸ್ ನೆರವು
ಶಿರಸಿ: ಬೋನ್ ಕ್ಯಾನ್ಸರ್’ನಿಂದ ಬಳಲುತ್ತಿರುವ 11 ವರ್ಷದ ಬಾಲಕಿಗೆ ಶಿರಸಿ ಪೊಲೀಸರು ನೆರವಾಗಿದ್ದಾರೆ. ಮಾರಿಗುಡಿ ಶಾಲೆಯಲ್ಲಿ ಓದುತ್ತಿರುವ ರೇವತಿ ಮಂಜುನಾಥ ನಾಯ್ಕ ಚಿಕಿತ್ಸೆಗೆ ಲಕ್ಷಾಂತರ ರೂ ಅಗತ್ಯವಿದ್ದು, ಪೊಲೀಸರು ತಮ್ಮ ವೇತನದ ಹಣದಲ್ಲಿ 30 ಸಾವಿರ ಒಟ್ಟುಗೂಡಿಸಿ ಬಾಲಕಿಗೆ ಹಸ್ತಾಂತರಿಸಿದ್ದಾರೆ. ಪಿಎಸ್ಐ ನಾಗಪ್ಪ ಬಿ ನೇತ್ರತ್ವದಲ್ಲಿ ಬಾಲಕಿಯ ಮನೆಗೆ ತೆರಳಿದ ಪೊಲೀಸರು ಆರ್ಥಿಕ ನೆರವು ನೀಡಿದರು.
ಅ 13ಕ್ಕೆ ಅರಣ್ಯ ಅತಿಕ್ರಮಣದಾರರ ಸಭೆ
ಕುಮಟಾ: ಅಕ್ಟೊಬರ್ 13ರ ಬೆಳಗ್ಗೆ ಮಾಸ್ತಿಕಟ್ಟೆ ದೇವಸ್ಥಾನದ ಸಂಭಾಗಣದಲ್ಲಿ ಅರಣ್ಯ ಅತಿಕ್ರಮಣದಾರರ ಸಭೆ ನಡೆಯಲಿದೆ.
ಈ ಸಭೆಯಲ್ಲಿ ನೋಂದಾಯಿತ ಸದಸ್ಯರಿಗೆ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿ, ಗುರುತಿನ ಪತ್ರ ವಿತರಿಸಲಾಗುತ್ತದೆ. ಜೊತೆಗೆ ನ.7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಚಲೋ ಕಾರ್ಯಕ್ರಮ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ಅರಣ್ಯ ಅತಿಕ್ರಮಣದಾರರು ಈ ಸಭೆಗೆ ಆಗಮಿಸುವಂತೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕೌಶಲ್ಯ ವೃದ್ಧಿಸಿಕೊಳ್ಳಲು ಮಾರುತಿ ಗುರೂಜಿ ಕರೆ
ಹೊನ್ನಾವರ: `ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಕೌಶಲ್ಯ, ವಿಶೇಷ ಚಿಂತನೆ ಅಭಿವ್ಯಕ್ತಿಗೊಂಡಾಗ ಮಾತ್ರ ಉದ್ಯೋಗ ಸೃಷ್ಠಿ ಆಗುತ್ತದೆ. ವೃತ್ತಿಪರ ವಿದ್ಯೆ ಕಲಿಸುವ ಅಗತ್ಯ ಎಲ್ಲಾ ಕಡೆ ಇದೆ’ ಎಂದು ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಹೇಳಿದರು.
ಖರ್ವಾ ಗ್ರಾಪಂ ವ್ಯಾಪ್ತಿಯ ಅಜ್ಜೋಡ್ಲುನಲ್ಲಿ ಗ್ರಾಮೀಣ ವಸತಿಸಹಿತ ಕೌಶಲ್ಯಾಭಿವೃದ್ಧಿ ಕೇಂದ್ರದ ಉದ್ಘಾಟನೆ ನೆರವೇರಿಸಿದ ಅವರು `ಶಾಲೆಯಲ್ಲಿ ಕಲಿಯುವ ಶಿಕ್ಷಣಕ್ಕಿಂತ ಜೀವನ ಶಿಕ್ಷಣ ಮುಖ್ಯ. ಪದಕ, ಪ್ರಶಸ್ತಿ ಪತ್ರ ನೈಜ ಬದುಕಿಗೆ ಪ್ರಯೋಜನ ಬರುವ ಸಾಧ್ಯತೆ ಕಡಿಮೆ. ಕೌಶಲ್ಯಗಳಿಗೆ ಉತ್ತೇಜನ ಸಿಕ್ಕರೆ ಮನುಷ್ಯ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಸಾಧ್ಯವಿದೆ’ ಎಂದರು.
ರೈಲ್ವೆ ದುರಂತ ತಡೆದ ಟ್ರಾಕ್ಮೇನ್
ಅಂಕೋಲಾ: ಹಾರವಾಡ ರೈಲು ನಿಲ್ದಾಣದ ಬಳಿ ರೈಲು ಹಳಿ ತುಂಡಾಗಿರುವುದನ್ನು ಗಮನಿಸಿದ ಟ್ರಾಕ್ಮ್ಯಾನ್ ಛತ್ರಪತಿ ಆನಂದು ಗೌಡ ತಮ್ಮ ಸಮಯಪ್ರಜ್ಞೆಯಿಂದ ರೈಲು ದುರಂತ ತಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಹಳಿಯ ಇಬ್ಬಾಗ ಆಗಿರುವುದನ್ನು ನೋಡಿ ಅವರು ಮೇಲಧಿಕಾರಿಗಳ ಗಮನಕ್ಕೆ ತಂದರು. ಹೀಗಾಗಿ ಆ ಮಾರ್ಗವಾಗಿ ಸಂಚರಿಸಬೇಕಿದ್ದ ಎಲ್ಲಾ ರೈಲುಗಳನ್ನು ಅಂಕೋಲಾ ಸೇರಿ ವಿವಿಧ ನಿಲ್ದಾಣದಲ್ಲಿ ತಡೆಹಿಡಿದು ಹಳಿ ದುರಸ್ಥಿ ನಡೆಸಲಾಯಿತು. ಶಿವಾಜಿ ಅವರ ಸಮಯಪ್ರಜ್ಞೆ ಗುರುತಿಸಿ ಕೊಂಕಣ ರೈಲ್ವೆ ಅಧಿಕಾರಿಗಳು ಗೌರವಿಸಿದರು.
ಕರಿಕಾನಮ್ಮ ಸನ್ನಿಧಿಯಲ್ಲಿ ನವರಾತ್ರಿ ಸಡಗರ
ಹೊನ್ನಾವರ: ಪುರಾಣ ಪ್ರಸಿದ್ಧ ಕ್ಷೇತ್ರವಾದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿoದ ನಡೆಯುತ್ತಿದೆ.
ತಪ್ಪಲಿನಲ್ಲಿ ಪುಣ್ಯಕ್ಷೇತ್ರವಾಗಿರುವ ಈ ಕ್ಷೇತ್ರದಲ್ಲಿ ಕರಿಕಾನಮ್ಮ ದೇವಿಯ ಶಿಲಾಮಯವಾದ ಉದ್ಭವ ಮೂರ್ತಿಯಿದೆ. 1955ರಲ್ಲಿ ವರದಳ್ಳಿಯ ಶ್ರೀಧರ ಸ್ವಾಮಿಗಳಿಂದ ಪುನರುತ್ಥಾನಗೊಂಡಿರುವ ಈ ದೇವಿಯು ತನ್ನಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ. ಅರಿಷಿನ ಮುಂಡಿಗೆ ಬಂದಾಗ ಅರಿಷಿನ ಮೂಟೆಯ ಹರಕೆ ಹೊರುವುದರಿಂದ ರೋಗ ವಾಸಿಯಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.
ನವರಾತ್ರಿಯ ಸಮಯದಲ್ಲಿ ದೇವಾಲಯದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮವಾದ ಸಪ್ತಶತಿ ಪಾರಾಯಣ, ಉಡಿ ಸೇವೆ, ಆರತಿ ಕುಂಕುಮಾರ್ಚನೆ, ಸರ್ವಸೇವೆ, ವಿವಿಧ ಬಗೆಯ ಹೋಮಗಳ ಮೂಲಕ ಸೇವೆ ಸಲ್ಲಿಸುವ ಅವಕಾಶ ನೀಡಲಾಗಿದೆ. ಪ್ರತಿ ದಿನವು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಗಮನಸೆಳೆದ ಸಮೂಹ ಭರತನಾಟ್ಯ
ದಾಂಡೇಲಿ: ನಗರದ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ನಡೆದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ನಾಟ್ಯಾಂಜಲಿ ಕಲಾ ಕೇಂದ್ರ, ಸಹ್ಯಾದ್ರಿ ಲಲಿತ ಕಲಾ ಕೇಂದ್ರ, ಸಂಸ್ಕಾರ ಸಹಕಾರ ಭಾರತಿ ಕೇಂದ್ರ ಶಂಕರ ಮಠ ಮತ್ತು ಭಾರತೀಯ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಸಮೂಹ ಭರತನಾಟ್ಯ ನಡೆಸಿಕೊಟ್ಟರು.
ಕಬ್ಬಿಣದ ಕಡಲೆಯಾದ ವಿಜ್ಞಾನ: ಸರಳಗೊಳಿಸಲು ಶಿಕ್ಷಕರ ಆಗ್ರಹ
ಶಿರಸಿ: ವಿಜ್ಞಾನ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆ ತರುವಂತೆ ಪ್ರೌಢ ಶಾಲಾ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಸಂಘದವರು ಬುಧವಾರ ಡಿಡಿಪಿಐ ಬಸವರಾಜ್ ಪಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
`ವಿಜ್ಞಾನದ ಗುಣಾತ್ಮಕ ಫಲಿತಾಂಶ ಕೆಳಮುಖವಾಗುತ್ತಿದೆ. ಹೀಗಾಗಿ ಸೂಕ್ತ ಬದಲಾವಣೆ ಅಗತ್ಯವಾಗಿದ್ದು ಪಠ್ಯ ಪುಸ್ತಕದಲ್ಲಿ ಭೌತ, ಜೀವ, ರಸಾಯನ ಶಾಸ್ತಗಳ ವಿಂಗಡನೆ ಇಲ್ಲದಿದ್ದರೂ ಪ್ರಶ್ನೆ ಪತ್ರಿಕೆಯಲ್ಲಿ ವಿಭಾಗವಾರು ವಿಂಗಡನೆ ಆಗುತ್ತಿದೆ’ ಎಂದವರು ವಿವರಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಅಜಯ ನಾಯಕ, ಕಾರ್ಯದರ್ಶಿ ಆರ್.ಆರ್.ಶೇಟ್, ಪ್ರಮುಖರಾದ ಶೈಕ್ಷಣಿಕ ಜಿಲ್ಲಾ ವಿಜ್ಞಾನ ಬಳಗದ ಅಧ್ಯಕ್ಷರಾದ ರಾಜಶೇಖರ್ ಎಂ ಹಾಗೂ ಕಾರ್ಯದರ್ಶಿ ರೀನಾ ನಾಯಕ್, ಪ್ರಮುಖ ಶಿಕ್ಷಕರಾದ ಸದಾನಂದ ದಬಗಾರ, ಧರ್ಮಾನಂದ, ಗಣೇಶ ಪಟಗಾರ, ಕವಿತಾ ಶೆಟ್, ಜಯಲಕ್ಷಿ ಗುನಗ, ನಾಗರಾಜ ಪಂಡಿತ್, ನಯನಾ ಭಂಡಾರಿ, ಜಯಲಕ್ಷ್ಮಿ ಹೆಗಡೆ, ಹನುಮಂತಪ್ಪ ಎಸ್.ಆರ್, ಸದಾನಂದ ಡಿ, ವಾಣಿ ಹೆಗಡೆ, ಪ್ರಿಯಾ ಗೌಡ, ಸುಬ್ರಹ್ಮಣ್ಯ ಗೌಡ, ಶೈಲೇಂದ್ರ ಎಂ.ಎಚ್, ರೀನಾ ನಾಯಕ ಇದ್ದರು.
ವೈದ್ಯರ ವರ್ಗಾವಣೆಗೆ ವಕೀಲರ ವಿರೋಧ
ಕುಮಟಾ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿನ ಉತ್ತಮ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡುತ್ತಿರುವುದನ್ನು ನ್ಯಾಯಾಯವಾದಿ ಆರ್.ಜಿ.ನಾಯ್ಕವಿರೋಧಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಜಿಲ್ಲೆಯ ಜನಪ್ರತಿನಿಧಿಗಳಿಂದ ಸುಸಜ್ಜಿತ ಆಸ್ಪತ್ರೆ ಮಾಡಲು ಆಗಲಿಲ್ಲ. ಇದೀಗ ಇರುವ ವೈದ್ಯರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ’ ಎಂದು ದೂರಿದರು. `ಜಿಲ್ಲೆಯಲ್ಲಿ ಆಸ್ಪತ್ರೆ ಇದ್ದರೆ ಉತ್ತಮ ವೈದ್ಯರಿಲ್ಲ, ಉತ್ತಮ ವೈದ್ಯರಿದ್ದರೆ ಆಸ್ಪತ್ರೆ ಇಲ್ಲ. ಹೀಗಿರುವಾಗ ಉತ್ತಮ ವೈದ್ಯರನ್ನು ವರ್ಗಾಹಿಸುವ ಸರ್ಕಾರ ನೀತಿ ಜಿಲ್ಲೆಯ ಜನರ ಮೇಲೆ ಗಧಾಪ್ರಹಾರ ಮಾಡಿದ ಹಾಗಿದೆ’ ಎಂದರು.
`ಡಾ.ಶ್ರೀನಿವಾಸ ನಾಯ್ಕ, ಡಾ. ಪಾಂಡುರ0ಗ ದೇವಾಡಿಗ, ಡಾ.ಗಜಾನನ ಭಟ್ಟ ಅವರನ್ನು ಇಲ್ಲಿಂದ ವರ್ಗಾಯಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ’ ಎಂದು ಗಣೇಶ ಭಟ್ಟ ಬಗ್ಗೋಣ ಹಾಗೂ ಹರೀಶ ಶೆಟ್ಟ ಹೇಳಿದರು. ಹಿರೇಗುತ್ತಿ ಗ್ರಾ.ಪಂ ಅಧ್ಯಕ್ಷ ಆನಂದ ನಾಯಕ ಸಹ ವೈದ್ಯರ ವರ್ಗಾವಣೆ ವಿರೋಧಿಸಿದರು.
ಸಚಿವನ ನಾಟಕ ಬಿಚ್ಚಿಟ್ಟ ಮಾಜಿ ಶಾಸಕ!
ಭಟ್ಕಳ: `ಮರಳು ಸಮಸ್ಯೆಗೆ ಸಚಿವರ ಕಪಟ ನಾಟಕವೇ ಕಾರಣ’ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮಂಕಾಳು ವೈದ್ಯರು ಅಧಿಕಾರಕ್ಕೆ ಬಂದಾಗಲೆಲ್ಲ ಮರಳಿನ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಹಿಂದೆ ಅವರು ಶಾಸಕರಾದಾಗ ಸಹ ಈ ಸಮಸ್ಯೆ ಬಂದಿತ್ತು’ ಎಂದರು. `ಈಗ ಹಸಿರು ಪೀಠದಲ್ಲಿ ಅರ್ಜಿ ಹಾಕಿರುವ ಕಾರಣ ಮರಳಿನ ಅಭಾವ ಎಂದು ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹೇಳಿಕೊಂಡಿದ್ದಾರೆ. ಈ ಅರ್ಜಿ ಹಾಕುವುದರ ಹಿಂದೆಯೂ ಕಾಂಗ್ರೆಸ್ ಮುಖಂಡರು ಇದ್ದಾರೆ’ ಎಂದು ದೂರಿದರು.
`ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿಯೂ ಉಡುಪಿಯ ವ್ಯಕ್ತಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯಮಂತ್ರಿಗಳು ಕರಾವಳಿ ಭಾಗದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಕರೆದು ಸಭೆ ನಡೆಸಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಮಾಡಿ ಕೊಟ್ಟಿದ್ದರು. ಹೊನ್ನಾವರ ಶರಾವತಿ ನದಿ ದಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಮರಳು ಸಾಗಾಟ ಕೆಲಸದಲ್ಲಿ ತೊಡಗಿಕೊಂಡಿದ್ದರೂ ಯಾರಿಗೂ ನಾನು ತೊಂದರೆ ಕೊಟ್ಟಿರಲಿಲ್ಲ. ಸಚಿವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಬೇಕು’ ಎಂದರು.