ಗುಳ್ಳಾಪುರದ ಅಂಗನವಾಡಿ ಸಹಾಯಕಿ ಪ್ರಭಾವತಿ ಬಾರ್ಕಿ ವಿರುದ್ಧ ಗ್ರಾಮಸ್ಥರು ಆರೋಪಗಳ ಸುರಿಮಳೆ ಸುರಿದಿದ್ದಾರೆ. ಅವರಿಗೆ ಪದೋನ್ನತಿ ನೀಡಿ ಶಿಕ್ಷಕಿ ಹುದ್ದೆ ನೀಡುವುದನ್ನು ಊರಿನವರು ವಿರೋಧಿಸಿದ್ದಾರೆ.
ಈ ಬಗ್ಗೆ ಯಲ್ಲಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಊರಿನ ಜನ ಅಂಗನವಾಡಿ ಸಹಾಯಕಿ ವರ್ತನೆಗಳ ಕುರಿತು ಈ ಹಿಂದೆ ನೀಡಿದ ದೂರಿನ ಬಗ್ಗೆಯೂ ನೆನಪು ಮಾಡಿದ್ದಾರೆ. ಸರ್ಕಾರಿ ಸೌಲಭ್ಯವನ್ನು ಸರಿಯಾಗಿ ಫಲಾನುಭವಿಗೆ ತಲುಪಿಸದಿರುವುದು, ಪೌಷ್ಠಿಕ ಆಹಾರ ವಿತರಣೆಯಲ್ಲಿನ ಲೋಪ ಹಾಗೂ ಅಂಗನವಾಡಿ ಕೇಂದ್ರಕ್ಕೆ ಹಾಜರಾಗದಿರುವ ಬಗ್ಗೆಯೂ ದೂರಿನಲ್ಲಿ ವಿವರಿಸಿದ್ದಾರೆ.
`ಅಂಗನವಾಡಿ ಕೇಂದ್ರದ ಸಮೀಪವೇ ಸಹಾಯಕಿ ಪ್ರಭಾವತಿ ಬಾರ್ಕಿ ಅವರ ಮನೆಯಿದೆ. ಅಂಗನವಾಡಿ ಕೇಂದ್ರಕ್ಕೆ ಬಾರದೇ ಅವರು ಮನೆಯಲ್ಲಿಯೇ ಕಾಲಹರಣ ಮಾಡುತ್ತಾರೆ. ಅಂಗನವಾಡಿಗೆ ಬರುವ ಮಕ್ಕಳನ್ನು ಬೆದರಿಸುವುದರಿಂದ ಮಕ್ಕಳು ಬರಲು ಭಯಪಡುತ್ತಿದ್ದಾರೆ’ ಎಂದು ಪ್ರಿಯಾ ಪಿಳ್ಳೆ ವಿವರಿಸಿದರು. `ಈ ಬಗ್ಗೆ ಪ್ರಶ್ನಿಸಿದ ಪಾಲಕರ ಮೇಲೆಯೂ ಪ್ರಭಾವತಿ ಬಾರ್ಕಿ ಅವರು ಕೂಗಾಡುತ್ತಾರೆ’ ಎಂದು ಮಂಗಲಾ ನಾಯ್ಕ ದೂರಿದರು.
`ಅಂಗನವಾಡಿ ಮಕ್ಕಳಿಗೆ ಸರಿಯಾಗಿ ಪುಡ್ ವಿತರಣೆ ಆಗುತ್ತಿಲ್ಲ. ರಜಾ ಅವಧಿಯಲ್ಲಿನ ಆಹಾರದ ಬಗ್ಗೆ ಪ್ರಶ್ನಿಸಿದರೆ ಅದನ್ನು ಮನೆಗೆ ಕೊಡಲು ಸಾಧ್ಯವಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಮಾರ್ಚ 13ರಂದು ಶಿಕ್ಷಕಿಯಾಗಿ ಪದೋನ್ನತಿ ಪಡೆಯಲು ಪಾಲಕರಿಗೆ ಅರಿವಿಲ್ಲದೇ, ಸಭೆ ನಡೆದಿದ್ದು ಇದಕ್ಕೆ ಎಲ್ಲರ ವಿರೋಧವಿದೆ’ ಎಂದು ನಾಗರಾಜ ಬಾಂದೇಕರ್ ಹಾಗೂ ದನಂಜಯ ಪಿಳ್ಳೆ ಆರೋಪಿಸಿದರು.
ಈ ಎಲ್ಲಾ ವಿಷಯಗಳ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ಅವರಿಗೆ ಊರಿನವರು ದೂರು ನೀಡಿದ್ದು, ಖುದ್ದು ಪರಿಶೀಲನೆಗಾಗಿ ಒತ್ತಾಯಿಸಿದ್ದಾರೆ.