ಶಿರಸಿ: ಆರು ವರ್ಷಗಳ ಕಾಲ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ದುಡಿದು ಅಲ್ಲಿನ ಎಲ್ಲಾ ಆಗು-ಹೋಗುಗಳನ್ನು ತಿಳಿದುಕೊಂಡ ಮಲ್ಲಿಖಾರ್ಜುನ ಗಜನಕಟ್ಟಿ ಇದೀಗ ಸೊಸೈಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ. `ಸೊಸೈಟಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಅಪಪ್ರಚಾರ ಮಾಡದೇ ಇರುವುದಕ್ಕಾಗಿ ಅವರು ಸೊಸೈಟಿ ಉಪಾಧ್ಯಕ್ಷರಿಗೆ ಫೋನ್ ಮಾಡಿ 76 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ!
2013ರಲ್ಲಿ ಶುರುವಾದ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ರಾಜ್ಯದ 28 ಕಡೆ ಶಾಖೆ ಹೊಂದಿದೆ. ವಿಜಯಪುರ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದ ಮಲ್ಲಿಖಾರ್ಜುನ ಹಣಕಾಸಿನ ಅವ್ಯವಹಾರ ನಡೆಸಿದ ಕಾರಣ ಎರಡು ವರ್ಷದ ಹಿಂದೆ ಕೆಲಸ ಕಳೆದುಕೊಂಡಿದ್ದರು. ಅದಾದ ನಂತರ ಶಿರಸಿಯ ಬೊಪ್ಪನಳ್ಳಿಯಲ್ಲಿರುವ ಸೊಸೈಟಿ ಉಪಾಧ್ಯಕ್ಷ ನಾರಾಯಣ ಕೋಮಾರ್ ಅವರಿಗೆ ಮಲ್ಲಿಖಾರ್ಜುನ ಬೆನ್ನತ್ತಿದ್ದರು.
ಹೊತ್ತುಗೊತ್ತಿಲ್ಲದ ಸಮಯದಲ್ಲಿ ಫೋನ್ ಮಾಡುವುದು, ಹಣಕ್ಕೆ ಬೇಡಿಕೆ ಇಡುವುದು, ಸೊಸೈಟಿ ವಿರುದ್ಧ ಅಪಪ್ರಚಾರ ನಡೆಸುವುದು ಮಲ್ಲಿಖಾರ್ಜುನರ ಸಾಮಾನ್ಯ ಕೆಲಸವಾಗಿತ್ತು. `ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಮಲ್ಲಿಖಾರ್ಜುನ ಎಲ್ಲಾ ಕಡೆ ಹಬ್ಬಿಸಿದ್ದರು. ಈ ರೀತಿ ಅಪಪ್ರಚಾರ ಮಾಡದೇ ಇರಲು 76 ಲಕ್ಷ ರೂ ಕೊಡಬೇಕು ಎಂದು ಕಾಡಿಸುತ್ತಿದ್ದರು. ಸೊಸೈಟಿಯವರು ಮಾತ್ರ ಇದಕ್ಕೆ ಒಪ್ಪಿರಲಿಲ್ಲ.
ಡಿ 17ರ ನಸುಕಿನ 1.30ಕ್ಕೆ ಸೊಸೈಟಿ ಉಪಾಧ್ಯಕ್ಷ ನಾರಾಯಣ ಕೋಮಾರ್ ಅವರಿಗೆ ಫೋನಾಯಿಸಿದ ಮಲ್ಲಿಖಾರ್ಜುನ ಮತ್ತೆ 76 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. `ಹಣ ಕೊಡದೇ ಇದ್ದರೆ ನಿಮ್ಮ ಹಾಗೂ ಸೊಸೈಟಿ ಹೆಸರು ಹಾಳು ಮಾಡುವೆ’ ಎಂದು ಬೆದರಿಸಿದ್ದಾರೆ. ಅದಾದ ನಂತರ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳಿಂದ ನೊಂದ ನಾರಾಯಣ ಕೋಮಾರ್ ಮಲ್ಲಿಕಾರ್ಜುನ ಗಜ್ಜಿನಕಟ್ಟಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
`ಸೊಸೈಟಿಗೆ ಸಾವಿರಾರು ಸದಸ್ಯರಿದ್ದು, ಉತ್ತಮ ವ್ಯವಹಾರ ಮಾಡಿಕೊಂಡಿದೆ. ಎಲ್ಲಿಯೂ ಸೊಸೈಟಿ ಹೆಸರು ಹಾಳು ಮಾಡಿಕೊಂಡಿಲ್ಲ. ಹೀಗಿರುವಾಗ ಮಾಜಿ ಸಿಬ್ಬಂದಿಯಿoದ ನಮಗೆ ತೊಂದರೆಯಾಗುತ್ತಿದೆ’ ಎಂದು ನಾರಾಯಣ ಕೋಮಾರ್ ದೂರಿದ್ದಾರೆ.