ಕುಮಟಾ – ಅಂಕೋಲಾ ಮಾರ್ಗದ ಬರ್ಗಿಯಲ್ಲಿ ಗುಡ್ಡ ಕುಸಿದು ಎರಡು ತಿಂಗಳಾದರೂ ಮಣ್ಣು ತೆರವು ಕಾರ್ಯ ನಡೆದಿಲ್ಲ. ಆ ಭಾಗದ ಸಂಚಾರಕ್ಕೆ ಅವಕಾಶ ಕಲ್ಪಿಸದ ಹಿನ್ನಲೆ ಜನಾಕ್ರೋಶ ವ್ಯಕ್ತವಾಗಿದೆ.
ಜು 16ರಂದು ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾಗಿ ಒಟ್ಟು 8 ಜನರು ಮೃತಪಟ್ಟಿದ್ದು, ಇನ್ನು ಮೂವರು ನಾಪತ್ತೆಯಾಗಿದ್ದಾರೆ. ಇದಾದ ಎರಡು ದಿನಗಳಲ್ಲಿಯೇ ಬರ್ಗಿಯ ಗುಡ್ಡ ಕುಸಿದು ಚತುಷ್ಪಥ ಹೆದ್ದಾರಿಯ ಒಂದು ಭಾಗದ ರಸ್ತೆಯನ್ನು ಆವರಿಸಿಕೊಂಡಿದೆ. ಆದರೆ ಶಿರೂರು ಭಾಗದ ಮಣ್ಣು ತೆರವಾದರೂ ಇಲ್ಲಿನ ಮಣ್ಣು ತೆರವಿಗೆ ಆಸಕ್ತಿವಹಿಸಿದವರಿಲ್ಲ.
ಚತುಷ್ಪಥ ಕಾಮಗಾರಿ ಆರಂಭಕ್ಕೂ ಮುನ್ನ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದವು. ಆದರೆ, ಈ ಕಾಮಗಾರಿ ಆರಂಭವಾದ ನಂತರ ಐಆರ್ಬಿ ಕಂಪನಿಯವರು ಮಾಡಿದ ಅವ್ಯವಸ್ಥೆಯಿಂದಾಗಿ ಇಲ್ಲಿಯವರೆಗೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಾ ಕಡೆ ಅವೈಜ್ಞಾನಿಕ ಕಾಮಗಾರಿ ಎದ್ದು ಕಾಣುತ್ತಿದೆ. ಸಣ್ಣ ಗುಡ್ಡ ಕುಸಿತವಾಗಿದ್ದರೂ ಅದನ್ನು ತೆರವು ಮಾಡಲು ಐಆರ್ಬಿ ಕಂಪನಿಯಿ0ದ ಆಗುತ್ತಿಲ್ಲ.
ರಸ್ತೆಯ ಮೇಲೆ ಮಣ್ಣು ಬಿದ್ದಿರುವುದರಿಂದ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ಅಪಘಾತಗಳ ಪ್ರಮಾಣ ಅಧಿಕವಾಗಲಿದೆ. ಹೀಗಾಗಿ ಒಂದು ವಾರದ ಒಳಗಾಗಿ ಇಲ್ಲಿಯ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸದೇ ಇದ್ದಲ್ಲಿ ಹೋರಾಟ ನಡೆಸುವುದಾಗಿ ಈಡಿಗ ಮಹಾ ಮಂಡಳಿ ಎಚ್ಚರಿಸಿದೆ.