ಪದವಿ ಪೂರ್ವ ಉಪನಿರ್ದೇಶಕರ ಕಚೇರಿ ನೀಡಿರುವ ವೇಳಾಪಟ್ಟಿಯಂತೆ ಪ್ರಥಮ ಪಿಯುಸಿ ಪರೀಕ್ಷೆ ನಡೆಸುವ ಬದಲು ಭಟ್ಕಳದ ಆನಂದ ಆಶ್ರಮ ಪಿಯು ಕಾಲೇಜು ಪ್ರತ್ಯೇಕ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಿದೆ. ಅದೇ ಪ್ರಶ್ನೆ ಪತ್ರಿಕೆ ಮತ್ತೊಂದು ದಿನ ಪರೀಕ್ಷೆ ನಡೆಯಲಿರುವ ಉಳಿದ ಕಾಲೇಜುಗಳಲ್ಲಿನ ಅಭ್ಯರ್ಥಿಗಳಿಗೂ ನೀಡಲಾಗುವುದರಿಂದ ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ!
ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ನಡೆಸುವ ಮೊದಲು ಜಿಲ್ಲೆಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರ ಅಸೋಸಿಯೇಶನ್ ಪ್ರತಿ ಕಾಲೇಜುಗಳಿಗೂ ಎರಡು ಆಯ್ಕೆ ನೀಡಿತ್ತು. ಒಂದು ಪ್ರಶ್ನೆ ಪತ್ರಿಕೆಯನ್ನು ಅವರವರ ಕಾಲೇಜುಗಳೇ ತಯಾರಿಸಿ ಪರೀಕ್ಷೆ ನಡೆಸುವುದು ಅಥವಾ ಜಿಲ್ಲಾಮಟ್ಟದಲ್ಲಿ ಮೂರು ಆವೃತ್ತಿಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಏಕರೂಪದ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಸುವುದು ಎಂಬ ಆಯ್ಕೆ ಕಾಲೇಜುಗಳ ಮುಂದಿತ್ತು. ಕೊನೆಗೆ ಜಿಲ್ಲಾಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸುವುದಕ್ಕೆ ಉತ್ತರ ಕನ್ನಡ ಜಿಲ್ಲೆ ಪಿಯುಸಿ ಕಾಲೇಜ್ ಪ್ರಾಂಶುಪಾಲರ ಅಸೋಸಿಯೇಶನ್ ಸಮ್ಮತಿ ನೀಡಿತ್ತು. ಅದರಂತೆ ಕಾರವಾರದ ಉಪನಿರ್ದೇಶಕರ ಕಚೇರಿಯವರು ಮೂರು ಆವೃತ್ತಿಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಪ್ರತಿ ಕಾಲೇಜಿಗೂ ನೀಡಿದ್ದರು. ಜೊತೆಗೆ ಜಿಲ್ಲೆಯ ಎಲ್ಲಾ ಕಾಲೇಜಿನವರು ನಿಗದಿತ ಏಕರೂಪದ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿತ್ತು.
ಆದರೆ, ಭಟ್ಕಳ ಆನಂದ ಆಶ್ರಮ ಪಿಯು ಕಾಲೇಜಿನವರು ಈ ಸೂಚನೆ ಪಾಲಿಸಲೇ ಇಲ್ಲ. ತಮ್ಮದೇ ಆದ ವೇಳಾಪಟ್ಟಿ ತಯಾರಿಸಿ ಕೊನೆಯಲ್ಲಿ ನಡೆಯುವ ಪರೀಕ್ಷೆಗಳನ್ನು ಮೊದಲೇ ನಡೆಸಿದರು. ಫೆ 24ಕ್ಕೆ ನಡೆಯಬೇಕಿದ್ದ ಬಯಾಲಜಿ, ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳನ್ನು ಫೆ 14ರಂದು ನಡೆಸಿದ್ದು, ಇದಕ್ಕೆ ಆ ಕಾಲೇಜಿನವರು ಪಿಯುಸಿ ಕಾಲೇಜಿನ ಪ್ರಾಂಶುಪಾಲರ ಅಸೋಸಿಯೇಶನ್ ನೀಡಿದ ಪ್ರಶ್ನೆ ಪತ್ರಿಕೆಯನ್ನು ಬಳಸಿಕೊಂಡಿದ್ದರು. ಆನ0ದ ಆಶ್ರಮ ಪಿಯು ಕಾಲೇಜು ತನ್ನದೇ ಪ್ರಶ್ನೆ ಪತ್ರಿಕೆ ರೂಪಿಸಿ ಅವರಿಗೆ ಬೇಕಾದಂತೆ ಪರೀಕ್ಷೆ ನಡೆಸಿದರೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, ವೇಳಾಪಟ್ಟಿಯನ್ನು ಮಾತ್ರ ತನಗೆ ಬೇಕಾದಂತೆ ರೂಪಿಸಿಕೊಂಡು ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾಮಟ್ಟದನ್ನು ಬಳಸಿದ್ದರಿಂದ ಅವಾಂತರ ಶುರುವಾಯಿತು. ಇದರಿಂದ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಇದೇ ಪ್ರಶ್ನೆ ಪತ್ರಿಕೆ ಬರುವ ಸಾಧ್ಯತೆ ಹೆಚ್ಚಿದ್ದರಿಂದ ಬೇರೆ ಕಾಲೇಜಿನ ಮಕ್ಕಳು ಆ ಪ್ರಶ್ನೆ ಪತ್ರಿಕೆ ಪಡೆಯಲು ಮುಗಿ ಬಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶ್ನೆ ಪತ್ರಿಕೆಗಳು ದೊಡ್ಡ ಪ್ರಮಾಣದಲ್ಲಿ ಹರಡಿದವು.
ಕಾಲೇಜಿಗೆ ನೋಟಿಸ್ ನೀಡಿದ ಡಿಡಿಪಿಯು!
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೊದಲು ಮೌನವಾಗಿದ್ದ ಡಿಡಿಪಿಯು ಇದೀಗ ಕಾಲೇಜಿಗೆ ನೋಟಿಸ್ ನೀಡಿರುವುದಾಗಿ ಸ್ಪಷ್ಠನೆ ನೀಡಿದ್ದಾರೆ. `ಆನಂದ ಆಶ್ರಮ ಕಾಲೇಜಿಗೆ ಮುಂಚಿತ ಸೂಚನೆ ನೀಡಿದರೂ ಪಾಲಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲವಾಗಿದ್ದು, ನೋಟಿಸ್ಗೆ ಉತ್ತರ ಬಂದ ನಂತರ ಮುಂದಿನ ಕ್ರಮ ಜರುಗಿಸುವೆ’ ಎಂದವರು ಹೇಳಿದ್ದಾರೆ. ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದ್ದರೂ ಬರೇ ನೋಟಿಸ್ ನೀಡಿ ಪ್ರಕರಣ ಮುಚ್ಚಿ ಹಾಕಿದ್ದಾರೆ. ಇನ್ನೂ `ಮುಂದೆ ನಡೆಯುವ ಜೀವಶಾಸ್ತ ಹಾಗೂ ಗಣಕ ವಿಜ್ಞಾನ ಪರೀಕ್ಷೆಗಳಿಗೆ ಆನಂದ ಆಶ್ರಮದವರು ನಡೆಸಿದ ಪ್ರಶ್ನೆ ಪತ್ರಿಕೆಗಳು ಪುನರಾವರ್ತನೆ ಆಗುವುದಿಲ್ಲ. ಪಾಲಕರು ಈ ಬಗ್ಗೆ ಗಮನಿಸಬೇಕು’ ಎಂದು ಡಿಡಿಪಿಯು ರಾಜಪ್ಪ ಹೇಳಿದ್ದಾರೆ.