ದಾಂಡೇಲಿ: ದಾಂಡೇಲಿ ಅಲೈಡ್ ಏರಿಯಾದಲ್ಲಿ ಭೂಮಿ ಖರೀದಿಸಿದ ಮೂವರಿಗೆ ಆತಂಕ ಎದುರಾಗಿದೆ. ತಾವು ಖರೀದಿಸಿದ ಜಾಗದಲ್ಲಿನ ಗಿಡ-ಗಂಟಿ ಸ್ವಚ್ಛ ಮಾಡಲು ತೆರಳಿದವರಿಗೆ ಅಕ್ಕಪಕ್ಕದ ಜನ ಆಗಮಿಸಿ ಪೆಟ್ರೋಲ್ ಸುರಿದಿದ್ದಾರೆ. `ಈ ಭೂಮಿ ಮೇಲೆ ಕಾಲಿಟ್ಟರೆ ಬೆಂಕಿ ಹಚ್ಚಿ ಕೊಲ್ಲುವೆ’ ಎಂದು ಬೆದರಿಕೆ ಹಾಕಿದ್ದಾರೆ!
ಅಲೈಡ್ ಏರಿಯಾದ ರಾಮದಾಸ ಗಣಪಾ ಮಿರಾಶಿ ಹಣಕಾಸಿನ ಅಡಚಣೆಯಿಂದ ತಮ್ಮ 9.94 ಗುಂಟೆ ಭೂಮಿಯನ್ನು ಮಾರಾಟ ಮಾಡಿದ್ದರು. ದಾಂಡೇಲಿ ಮಾರುತಿನಗರದ ನಾಗರಾಜ ದಾರಿಮಯಮ್ಲಾ, ದಾಂಡೇಲಿಯ ಪ್ರಶಾಂತ ಶೆಟ್ಟಿ ಹಾಗೂ ಸುರೇಶ ಜೋಶಿ ಇದನ್ನು ಖರೀದಿಸಿದ್ದರು.
ಸೋಮವಾರ ಈ ಭೂಮಿಯಲ್ಲಿ ಬೆಳೆದ ಗಿಡ-ಗಂಟಿಗಳನ್ನು ಸ್ವಚ್ಛ ಮಾಡಲು ಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದರು. ಆಗ, ಈ ಕೆಲಸಕ್ಕೆ ಅಲ್ಲಿನ ರಾಮಚಂದ್ರ ಪವಾರ್, ವೇದ ಕಲ್ಲೂರು, ಅನೀಲ ಕೊಲ್ಲೂರು, ಆರತಿ ಕೊಲ್ಲೂರು, ಪಾಂಡುರAಗ ಹರಿಜನ, ಶಿವಾನಂದ ಹರಿಜನ, ಮಂಜುಳಾ ನಾಯರ್, ಭಾರತಿ ಕಾಂಬಳೆ ಹಾಗೂ ಯಲ್ಲವ್ವ ಕಾಂಬಳೆ ಅಡ್ಡಪಡಿಸಿದರು.
ಮೊದಲು ಕೂಲಿ ಕೆಲಸಕ್ಕೆ ಬಂದಿದ್ದ ಗಣೇಶ ಕೇರಕರ್ ಹಾಗೂ ಇತರರಿಗೆ ಬೈದ ಅಲ್ಲಿನವರು ನಂತರ ಭೂಮಿ ಖರೀದಿಸಿದ ಮೂವರಿಗೂ ಮೊದಲಿಸಿದರು. `ನಾವು ಈ ಆಸ್ತಿ ಖರೀದಿಸಿದ್ದೇವೆ. ಅದರ ಅಭಿವೃದ್ಧಿಗೆ ಬಂದಿದ್ದೇವೆ’ ಎಂದರೂ ಕೇಳಲಿಲ್ಲ. ನಾಗರಾಜ ದಾರಿಮಯಮ್ಲಾ ಅವರ ಬಳಿಯಿಂದ ಪೆಟ್ರೋಲ್ ಕಸಿದ ಅಲ್ಲಿದ್ದವರು ಭೂಮಿ ಖರೀದಿದಾರರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದರು.
ಇದರಿಂದ ಬೆದರಿದ ನಾಗರಾಜ ದಾರಿಮಯಮ್ಲಾ, ದಾಂಡೇಲಿಯ ಪ್ರಶಾಂತ ಶೆಟ್ಟಿ ಹಾಗೂ ಸುರೇಶ ಜೋಶಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.