ಯಲ್ಲಾಪುರ: ಕಳೆದ ಮೂರು ದಿನಗಳಿಂದ ಶಿರಸಿ – ಯಲ್ಲಾಪುರ ರಸ್ತೆಯಲ್ಲಿ ಗುಂಪು ಗುಂಪಾಗಿ ಸಾವನಪ್ಪಿದ್ದ ನಾಯಿಗಳನ್ನು ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ ಮಣ್ಣು ಮಾಡಿಸಿದ್ದಾರೆ. ಗುರುವಾರ ಬೆಳಗ್ಗೆ ಎದ್ದ ತಕ್ಷಣ ಅವರು ಜೆಸಿಬಿ ಜೊತೆ ಸ್ಥಳಕ್ಕೆ ತೆರಳಿ ಗ್ರಾಮದ ನೈರ್ಮಲ್ಯ ಕಾಪಾಡುವ ಕೆಲಸ ಮಾಡಿದರು.
ಕಳೆದ ಒಂದು ವಾರದ ಹಿಂದೆ ಮಂಚಿಕೇರಿ ಬಳಿಯ ತೂಕದಬೈಲ್ ಬಳಿ ಅಪರಿಚಿತರು ಟ್ರಕ್ ತುಂಬ ನಾಯಿಗಳನ್ನು ತಂದು ಬಿಟ್ಟಿದ್ದರು. ಮೂರು ದಿನಗಳ ಹಿಂದೆ ನೂರಾರು ನಾಯಿಗಳು ಗುಂಪು ಗುಂಪಾಗಿ ಸಾವನಪ್ಪಿದ್ದು, ವಿಷ ಪ್ರಾಶನದ ಅನುಮಾನ ವ್ಯಕ್ತವಾಗಿದ್ದವು. ನಾಯಿಗಳನ್ನು ತಂದು ಬಿಟ್ಟಿರುವ ಬಗ್ಗೆ ಗ್ರಾಮ ಪಂಚಾಯತಗೆ ಮಾಹಿತಿಯಿದ್ದರೂ, ಅವು ಸಾವನಪ್ಪಿದ ಬಗ್ಗೆ ಅರಿವಿರಲಿಲ್ಲ. ಫೋಟೋ-ದಾಖಲೆಗಳ ಜೊತೆ S News’ಡಿಜಿಟಲ್ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು.
`ತುರ್ತು ಕ್ರಮ ಜರುಗಿಸುವೆ’ ಎಂದು ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ ಈ ವೇಳೆ ಪ್ರತಿಕ್ರಿಯಿಸಿದ್ದು, ಅವರು ಇದೀಗ ನುಡಿದಂತೆ ನಡೆದಿದ್ದಾರೆ. ಬೆಳಗ್ಗೆ 6.30ಕ್ಕೆ ಅವರು ಶಿರಸಿ-ಯಲ್ಲಾಪುರ ರಸ್ತೆ ಮಾರ್ಗವಾಗಿ ಓಡಾಡಿ ಜೆಸಿಬಿ ಯಂತ್ರದ ಮೂಲಕ ಸಾವನಪ್ಪಿದ ಶ್ವಾನಗಳನ್ನು ಮಣ್ಣು ಮಾಡಿಸಿದರು. `ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸದಾ ಬದ್ದ’ ಎಂದವರು ಈ ವೇಳೆ ಹೇಳಿದರು.
ಇದನ್ನೂ ಓದಿ: ವಿಷ ಪ್ರಾಶನದ ಅನುಮಾನ: ನೂರಾರು ನಾಯಿಗಳ ಮರಣ
ನಾಯಿಗಳ ಸಾವಿನಿಂದ ಈ ಪ್ರದೇಶ ಗಬ್ಬು ನಾರುತ್ತಿದ್ದು, ಅದಾಗಿಯೂ ಗ್ರಾ ಪಂ ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ, ಬೋವಿ ಸಮಾಜದ ಮುಖಂಡ ಪಕೀರಪ್ಪ ಬೋವಿವಡ್ಡರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅರಣ್ಯ ಪ್ರದೇಶದಲ್ಲಿ ಸಾವನಪ್ಪಿದ ನಾಯಿಗಳನ್ನು ಹುಡುಕಿ ಮಣ್ಣು ಮಾಡಲಾಯಿತು.