ಕುಮಟಾ: `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ’ ಎಂದವರಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಗೋಕರ್ಣದ ಅಶೋಕೆಯಲ್ಲಿ ಮಾತನಾಡಿದ ಅವರು `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ ಎಂದಾದರೆ ಮಠಕ್ಕೆ ತಾಮ್ರ ಶಾಸನ ಹೇಗೆ ನೀಡಲಾಗಿದೆ? ಜೊತೆಗೆ ಸಿಂಹಾಸನ, ರಾಜಲಾಂಛನಗಳು ಹೇಗೆ ಬರುತ್ತವೆ? ಎಂದವರು ಪ್ರಶ್ನಿಸಿದ್ದಾರೆ. ರಾಮಚಂದ್ರಾಪುರ ಮಠ ಸಹ ಶಂಕರಾಚಾರ್ಯ ಪೀಠ ಎಂದು ಸಾರಿರುವ ಅವರು `ನಮ್ಮದು ಸ್ವತಂತ್ರ ಅಸ್ತಿತ್ವದ, ರಾಜಮಾನ್ಯವಾದ, ರಾಜಪ್ರಭುತ್ವಕ್ಕೆ ಸಮಾನ ಸ್ಥಾನಮಾನ ಹೊಂದಿದ್ದ ಪೀಠ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಹೇಳಿದ್ದಾರೆ.
`ರಘೂತ್ತಮ ಮಠ ಹಾಗೂ ಶೃಂಗೇರಿ ಮಠ ಶಂಕರಾಚಾರ್ಯ ಪರಂಪರೆಗಳು ಎರಡು ಮಠಗಳು. ಗೋಕರ್ಣ ಮಹಾಬಲೇಶ್ವರ ಸಮ್ಮುಖದಲ್ಲಿ ಉಭಯ ಗುರುಗಳ ಸಮಾಯೋಗ ನೆರವೇರುತ್ತದೆ. ಆ ಸಂದರ್ಭದಲ್ಲಿ ನಮ್ಮ ಮಠದ ಎಲ್ಲ ಹಿರಿಮೆ ಗರಿಮೆಗಳನ್ನು ಶೃಂಗೇರಿ ಮಠಾಧೀಶರು ಬಣ್ಣಿಸಿದ್ದಾರೆ. ಶಂಕರ ಪರಂಪರೆಯಲ್ಲಿ ವಿದ್ಯಾರಣ್ಯರಂಥ ಗುರುಗಳು ಮತ್ತೆ ಬಂದಿಲ್ಲ. ಮತ್ತೊಂದು ಮಠವನ್ನು ಅದ್ವಿತೀಯವಾಗಿ ಗೌರವಿಸಿದ ಅವರು ಶ್ರೀಮಠಕ್ಕೆ ರಾಜಲಾಂಛನಗಳೆಲ್ಲ ಇರಬೇಕು’ ಎಂದವರು ಹೇಳಿದ್ದಾರೆ.
`ಶಂಕರಾಚಾರ್ಯರಿAದ ಎರಡೂ ಪರಂಪರೆಗಳು ಬಂದಿವೆ. ಸುರೇಶ್ವರಾಚಾರ್ಯರ ಬಳಿಕ ಎರಡು ಮಠಗಳು ಮುಂದುವರಿಯುತ್ತವೆ. ಸುರೇಶ್ವರಾಚಾರ್ಯರ ಶಿಷ್ಯರಲ್ಲಿ ಜ್ಯೇಷ್ಠರು ಯಾರು ಎಂಬ ಪ್ರಶ್ನೆ ಬರುತ್ತದೆ. ನಾವು ಎರಡೂ ಮಠಗಳು ಒಂದೇ ಪರಂಪರೆಗೆ ಸೇರಿದವು. ರಘೂತ್ತಮ ಮಠ ಜ್ಯೇಷ್ಠ ಪರಂಪರೆ ಎಂದು ವಿದ್ಯಾರಣ್ಯರೇ ಹಾಡಿ ಹೊಗಳಿದ್ದಾರೆ. ಅದು ವಿದ್ಯಾರಣ್ಯರ ಹೃದಯ ವೈಶಾಲ್ಯವನ್ನು ತಿಳಿಸುತ್ತದೆ’ ಎಂದರು.
`ನಮ್ಮ ಮಠವನ್ನು ಶಂಕರಾಚಾರ್ಯ ಪೀಠವೇ ಅಲ್ಲ ಎಂಬ ಅಪಪ್ರಚಾರವೂ ನಡೆಯಿತು. ಹಾಗಿಲ್ಲದಿದ್ದರೆ ಈ ತಾಮ್ರಶಾಸನ ಹೇಗೆ ನೀಡಲಾಗಿದೆ? ಜತೆಗೆ ಸಿಂಹಾಸನ, ರಾಜಲಾಂಛನಗಳು ಹೇಗೆ ಬರುತ್ತವೆ?’ ಎಂದು ಪ್ರಶ್ನಿಸಿದರು. `ರಘೂತ್ತಮ ಮಠ ಶಾಖಾ ಮಠ ಅಲ್ಲ ಎನ್ನುವುದನ್ನು ಆ ಶಾಸನವೇ ಸಾರುತ್ತದೆ. ಶಾಖಾ ಮಠಕ್ಕೆ ಸಿಂಹಾಸನ, ಕಿರೀಟ, ಮಂಡಲಾಚಾರ್ಯತ್ವವನ್ನು ಹೇಗೆ ನೀಡಲಾಗುತ್ತದೆ. ಇದು ಸ್ವತಂತ್ರ ಮಠ ಎನ್ನುವುದನ್ನು ಸೂರ್ಯಸ್ಪಷ್ಟವಾಗಿ ಶಾಸನ ಹೇಳುತ್ತದೆ’ ಎಂದವರು ಪ್ರತಿಪಾದಿಸಿದರು.