ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಉತ್ತರ ಕನ್ನಡ ಜಿಲ್ಲೆಯ ಜೊತೆ ಭಾವನಾತ್ಮಕ ಸಂಬoಧ ಹೊಂದಿದ್ದರು. ಹೀಗಾಗಿಯೇ ಜಿಲ್ಲೆಯ ಅನೇಕ ಗಣ್ಯರೊಂದಿಗೆ ಅವರು ವೇದಿಕೆ ಹಂಚಿಕೊoಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೂ ಎಸ್ ಎಂ ಕೃಷ್ಣ ಅವರು ಅತ್ಯಂತ ಆಪ್ತರಾಗಿದ್ದರು. ರಾಮಕೃಷ್ಣ ಹೆಗಡೆ ಅವರಿಗೆ ಪೂರ್ವಜರಿಂದ ಬಂದ ಅಡಿಕೆ ತೋಟ ಕಾಪಾಡಿಕೊಳ್ಳುವಲ್ಲಿ ಎಸ್ ಎಂ ಕೃಷ್ಣ ಅವರು ನೆರವಾಗಿದ್ದರು!
1999ರಲ್ಲಿ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದರು. ಆ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ರಾಮಕೃಷ್ಣ ಹೆಗಡೆ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮಕೃಷ್ಣ ಹೆಗಡೆ ಅವರನ್ನು ಉಳಿಸಿಕೊಳ್ಳಬೇಕು ಎಂದರೆ ಲಂಡನ್’ಗೆ ಕರೆದೊಯ್ದು ಆಪರೇಶನ್ ಮಾಡಿಸಬೇಕಿತ್ತು. ಆದರೆ, ರಾಮಕೃಷ್ಣ ಹೆಗಡೆ ಅವರ ಬಳಿ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಕಾಸಿರಲಿಲ್ಲ. ಅವರ ಚಿಕಿತ್ಸೆಗೆ 35ರಿಂದ 40 ಲಕ್ಷ ರೂ ಅಗತ್ಯವಿದ್ದು, ಇದಕ್ಕಾಗಿ ರಾಮಕೃಷ್ಣ ಹೆಗಡೆ ಅವರು ತಮ್ಮ ಪೂರ್ವಜರಿಂದ ಬಂದ ತೋಟ ಮಾರಲು ನಿರ್ಧರಿಸಿದ್ದರು.
ರಾಮಕೃಷ್ಣ ಹೆಗಡೆ ಅವರಿಗೆ ಅನಾರೋಗ್ಯ ವಿಷಯ ಅರಿತ ಎಸ್ ಎಂ ಕೃಷ್ಣ ಅವರು ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದರು. ಆಗ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅಲ್ಲಿ ಕಣ್ಣೀರು ಹಾಕುತ್ತಿದ್ದರು. `ವಿದೇಶಕ್ಕೆ ಹೋಗಿ ಆಪರೇಶನ್ ಮಾಡಿಸಬೇಕು ಎಂದು ಡಾಕ್ಟರ್ ಹೇಳಿದ್ದಾರೆ. ಅದು ತುಂಬಾ ಕಷ್ಟ’ ಎಂದು ಶಕುಂತಲಾ ಹೆಗಡೆ ಎಸ್ ಎಂ ಕೃಷ್ಣ ಅವರ ಬಳಿ ಹೇಳಿಕೊಂಡಿದ್ದರು. ತಕ್ಷಣ ಎಸ್ ಎಂ ಕೃಷ್ಣ ಅವರು 35 ಲಕ್ಷ ರೂ ಮಂಜೂರಿ ಮಾಡಿ ರಾಮಕೃಷ್ಣ ಹೆಗಡೆ ಅವರನ್ನು ಲಂಡನ್’ಗೆ ಕಳುಹಿಸಿದ್ದರು.
ಚಿಕಿತ್ಸೆ ಪಡೆದು ಬಂದ ರಾಮಕೃಷ್ಣ ಹೆಗಡೆ ಅವರ ಆರೋಗ್ಯ ವಿಚಾರಿಸಲು ಎಸ್ ಎಂ ಕೃಷ್ಣ ಅವರು ಮತ್ತೆ ತೆರಳಿದ್ದರು. ಆಗ ಎಸ್ ಎಂ ಕೃಷ್ಣ ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ರಾಮಕೃಷ್ಣ ಹೆಗಡೆಯವರು `ನೀವು ನನ್ನ ಸಹಾಯಕ್ಕೆ ಬರದೇ ಹೋಗಿದ್ದರೆ ನನ್ನ ಪೂರ್ವಿಕರ ತೋಟ ಮಾರಬೇಕಿತ್ತು’ ಎಂದು ಹೇಳಿ ಭಾವುಕರಾದರು.
2020ರ ಜನವರಿ 4ರಂದು ಎಸ್ ಎಂ ಕೃಷ್ಣ ಅವರ ಜೀವನ ಚರಿತ್ರೆ ಸ್ಮತಿ ವಾಹಿನಿ ಬಿಡುಗಡೆಯಾಗಿದ್ದು, ಅದರಲ್ಲಿ ಈ ಎಲ್ಲಾ ಅಂಶಗಳು ಉಲ್ಲೇಖವಾಗಿದೆ.