ಹೊನ್ನಾವರ: ಚಂದಾವರ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಹರ್ಷ ಗೌಡ ಅವರಿಗೆ ಅಪರಿಚಿತ ಪಲ್ಸರ್ ಬೈಕು ಗುದ್ದಿದೆ. ಪರಿಣಾಮ ಹರ್ಷ ಗೌಡ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಚಂದಾವರದ ವಡಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಹರ್ಷ ಗೌಡ ಡಿ 14ರಂದು ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ಮರಳುತ್ತಿದ್ದರು. ಶಾಲೆಯ ಗೇಟಿನಿಂದ ಹೊರ ಬಿದ್ದ ತಕ್ಷಣ ವೇಗವಾಗಿ ಬಂದ ಅಪರಿಚಿತ ಹರ್ಷ ಅವರಿಗೆ ಬೈಕು ಗುದ್ದಿ ಪರಾರಿಯಾಗಿದ್ದಾನೆ. ಅಪಘಾತದ ಬಗ್ಗೆ ಅರಿವಾದರೂ ಬೈಕು ನಿಲ್ಲಿಸಿಲ್ಲ. ನೆಲಕ್ಕೆ ಬಿದ್ದ ಹರ್ಷ ಗೌಡ ಅವರನ್ನು ಶಿಕ್ಷಕ ರೋಹಿದಾಸ ನಾಯ್ಕ ಉಪಚರಿಸಿದರು.
ಅದಾದ ನಂತರ ಹರ್ಷ ಗೌಡರ ದೊಡ್ಡಪ್ಪ ಈರು ಗೌಡ ಅಲ್ಲಿಗೆ ಆಗಮಿಸಿದ್ದು, ಇತರೆ ಶಿಕ್ಷಕರೆಲ್ಲರೂ ಸೇರಿ ಗಾಯಗೊಂಡ ವಿದ್ಯಾರ್ಥಿಯನ್ನು ರಿಕ್ಷಾ ಮೂಲಕ ಕುಮಟಾ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದೊಯ್ಯುವಂತೆ ತಿಳಿಸಿದ್ದು, ಬೇರೆ ಆಸ್ಪತ್ರೆಯೊಂದರಲ್ಲಿ ಹರ್ಷ ಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಎಲ್ಲಾ ಘಟನಾವಳಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಶಿಕ್ಷಕ ರೋಹಿದಾಸ ನಾಯ್ಕ ಅವರು ಅಪರಿಚಿತ ಬೈಕ್ ಸವಾರನನ್ನು ಪತ್ತೆ ಮಾಡುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಂಪು ಪಲ್ಸರ್ ಬೈಕ್ ಹೊಂದಿದವನ ಹುಡುಕಾಟ ನಡೆಸಿದ್ದಾರೆ.