`ಸೌಗತ ಎ ಮೋದಿ’ ಕಿಟ್ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಗಿದೆ. ಯಲ್ಲಾಪುರದ ಕಾಂಗ್ರೆಸ್ ಯುವಮೋರ್ಚಾ ಗಣೇಶ ಹೆಗಡೆ ನೀಡಿದ ಹೇಳಿಕೆಗೆ ಬಿಜೆಪಿ ತಾಲೂಕಾ ಅಧ್ಯಕ್ಷ ಪ್ರಸಾದ ಹೆಗಡೆ ತಿರುಗೇಟು ನೀಡಿದ್ದಾರೆ.
`ಬಿಜೆಪಿ ಸಹ ಮುಸ್ಲಿಂ ಓಲೈಕೆಗಾಗಿ ಸೌಗತ ಎ ಮೋದಿ ಕಿಟ್ ವಿತರಿಸುತ್ತಿದೆ’ ಎಂದು ಗಣೇಶ ಹೆಗಡೆ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ `ಬಿಜೆಪಿ ಎಂದಿಗೂ ವಸುಧೈವ ಕುಟುಂಬಕ0 ಧ್ಯೇಯ ಪಾಲಿಸುತ್ತಿದೆ. ಇದೇ ಕಾರಣದಿಂದ ಬಿಜೆಪಿ ಆಡಳಿತ ಅವಧಿಯಲ್ಲಿ ಅಬ್ದುಲ್ ಕಲಾಂ, ರಾಮನಾಥ ಕೋವಿಂದ ಮತ್ತು ದ್ರೌಪದಿ ಮುರ್ಮಾ ದೇಶದ ಅತ್ಯುನ್ನತ ಗೌರವದ ಸ್ಥಾನವನ್ನು ಪಡೆದಿದ್ದಾರೆ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ.
`ಬಿಜೆಪಿ ಪಕ್ಷದ ಸೇವಾ ಹೀ ಸಂಘಟನೆ ಅಡಿಯಲ್ಲಿ ವಿವಿಧ ಮೋರ್ಚಾಗಳಿವೆ. ಅದರಲ್ಲಿ ಅಲ್ಪಸಂಖ್ಯಾತ ಮೋರ್ಚಾ ಸಹ ಒಂದಾಗಿದ್ದು, ಅದರ ಅಡಿ ಸಾಮಾಜಿಕ ಸೇವೆ ನಡೆಯುತ್ತಿದೆ. ಕಾಂಗ್ರೆಸ್ಸಿಗರನ್ನು ಕೇಳಿ ಸಮಾಜ ಸೇವೆ ಮಾಡುವ ಪರಿಪಾಠ ಬಿಜೆಪಿಯಲ್ಲಿಲ್ಲ’ ಎಂದು ಪ್ರಸಾದ ಹೆಗಡೆ ಪ್ರತಿಕ್ರಿಯಿಸಿದ್ದಾರೆ. `ಅಂತ್ಯೋದಯ ಪರಿಕಲ್ಪನೆ ಜಾರಿ ತರುವಲ್ಲಿ ಬಿಜೆಪಿ ಶ್ರಮಿಸುತ್ತಿದೆ. ದೇಶ ಭದ್ರತೆ ಮತ್ತು ರಾಷ್ಟ್ರೀಯತೆ ಮತ್ತು ಅಂತ್ಯೋದಯ ಪರಿಕಲ್ಪನೆ ಕುರಿತು ಮಾತನಾಡಲು ಕಾಂಗ್ರೆಸ್ಸಿಗೆ ನೈತಿಕತೆಯೇ ಇಲ್ಲ’ ಎಂದು ಹೇಳಿದ್ದಾರೆ.
`ಒಂದು ಸಮಾಜಕ್ಕೆ ಮಾತ್ರ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಮದುವೆಗೆ 50 ಸಾವಿರ, ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ, ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ, ಕಾಲೋನಿಗೆ ವಿಶೇಷ ಪ್ಯಾಕೇಜ್ ನೀಡಿದ್ದು ಕಾಂಗ್ರೆಸ್ಸಿನ ತುಷ್ಠೀಕರಣ ನೀತಿ ಅಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ. `ಬಜೆಟ್ ವೇಳೆ ಕಾಂಗ್ರೆಸ್ಸಿಗರಿಗೆ ಹಿಂದುಳಿದ ದಲಿತ ಸಮಾಜದ ನೆನಪು ಬಂದಿಲ್ಲ. ಹೀಗಾಗಿ ತುಷ್ಠೀಕರಣ ನೀತಿಯೇ ಕಾಂಗ್ರೆಸ್ ಸಿದ್ಧಾಂತ ಎಂಬುದು ಸ್ಪಷ್ಠ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ.