ಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಮೂಜಿಬ್ ಉಸ್ಮಾನ್ ಷರೀಫ್ ಎಂಬಾತರು ಲೋಕಾಯುಕ್ತ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಯಾವುದೇ ಹಿಂಬರಹ ನೀಡದಿರುವುದೇ ದೂರಿನ ಸಾರಾಂಶ!
ಜನತಾ ಪ್ಲೋಟಿನ ಮಾಸೂರು ಕ್ರಾಸಿನಲ್ಲಿ ಮೂಜಿಬ್ ಉಸ್ಮಾನ್ ಷರೀಫ್ ಅವರ ಮನೆಯಿದೆ. ಮನೆ ಪಕ್ಕದಲ್ಲಿ ಅವರು ಶೆಡ್ ನಿರ್ಮಿಸಿ ಗ್ಯಾರೇಜ್ ನಡೆಸುತ್ತಾರೆ. ಈ ಗ್ಯಾರೇಜಿಗೆ ಅನುಮತಿ ಅಥವಾ ದೃಢೀಕರಣ ಕೋರಿ ಅವರು ಹೊಲನಗದ್ದೆ ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿದ್ದಾರೆ. ಗ್ಯಾರೇಜ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುವುದಾಗಿ ಹೇಳುವ ಪಿಡಿಓ ನಾಗರಾಜ ನಾಯ್ಕ ಅವರು ನಿತ್ಯ ಅದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ, ಒಮ್ಮೆಯೂ ಗ್ಯಾರೇಜ್ ಪರಿಶೀಲನೆಗೆ ಬಂದಿಲ್ಲ!
ಯಾವುದೇ ಕಚೇರಿಗೆ ಅರ್ಜಿ ಸಲ್ಲಿಕೆಯಾದ ನಂತರ 15 ದಿನಗಳ ಒಳಗೆ ಹಿಂಬರಹ ನೀಡಬೇಕು ಎಂಬುದು ನಿಯಮ. ಆದರೆ, ಇಲ್ಲಿ ಮೂರು ವರ್ಷ ಕಳೆದರೂ ಹಿಂಬರಹ ಬಂದಿಲ್ಲ. ಜೊತೆಗೆ ಅಗತ್ಯ ಅನುಮತಿಯೂ ಸಿಕ್ಕಿಲ್ಲ. ಗ್ಯಾರೇಜ್ ನಡೆಸುತ್ತಿರುವ ಬಗ್ಗೆ ದೃಢೀಕರಣವನ್ನು ದೊರೆತಿಲ್ಲ. ಇದರಿಂದ ಕಟ್ಟಡ ನವೀಕರಣಕ್ಕೆ ಸಹ ಸಮಸ್ಯೆಯಾಗಿದೆ. ಈ ಹಿನ್ನಲೆ ಮೂಜಿಬ್ ಉಸ್ಮಾನ್ ಷರೀಫ್ ಅವರು ಶುಕ್ರವಾರ ನೋಂದಾಯಿತ ಅಂಚೆ ಮೂಲಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
`ತನ್ನ ಗ್ಯಾರೇಜ್ ಬೀಳುವ ಸ್ಥಿತಿಯಲ್ಲಿದೆ. ಇದರ ನವೀಕರಣ ಅಗತ್ಯವಿದ್ದು, ಕಳೆದ 5 ವರ್ಷದಿಂದ ಇದರ ಕಾಗದ ಪತ್ರಕ್ಕಾಗಿ ಓಡಾಟ ನಡೆಸುತ್ತಿದ್ದೇನೆ. ಆದರೆ, ಯಾವುದೇ ಕೆಲಸವಾಗಿಲ್ಲ’ ಎಂದು ಮೂಜಿಬ್ ಉಸ್ಮಾನ್ ಷರೀಫ್ ದೂರಿದರು. `ಫೋನ್ ಮಾಡಿ ಬನ್ನಿ ಎಂದು ಪಿಡಿಓ ಹೇಳುತ್ತಾರೆ. ಆದರೆ, ಗ್ರಾ ಪಂ ಕಚೇರಿಯ ಫೋನ್ ನಂ ಹಾಳಾಗಿದೆ. 08386-220282ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ಪಿಡಿಓ ಕಚೇರಿಯಲ್ಲಿದ್ದಾರೆಯೇ? ಎಂದು ಪ್ರಶ್ನಿಸಿ ಅಲ್ಲಿಗೆ ತೆರಳಲು ತೊಂದರೆಯಾಗಿದೆ’ ಎಂದು ವಿವರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸಹ ದೂರು ನೀಡಿದ್ದಾರೆ. ಈ ಹಿಂದೆ ಸಹ ಈ ಪಿಡಿಓ ಕಾರ್ಯವೈಖರಿ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.