ಶಿರಸಿ: ಮುಂಬೈ, ಪೂಣೆ ಸೇರಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗ ಅವಕಾಶಗಳಿದ್ದರೂ ಅದೆಲ್ಲವನ್ನು ನಿರಾಕರಿಸಿ ಶಿರಸಿಗೆ ಬಂದವರು ಡಾ ಎ ಎನ್ ಪಟವರ್ಧನ್. ಏಳು ದಶಕದ ಹಿಂದೆ ಶಿರಸಿಯಲ್ಲಿದ್ದ ಆ ವೈದ್ಯರ ಸೇವೆ ಸ್ಮರಿಸಿ ಮಂಗಳವಾರ 21 ವೈದ್ಯರು ರಕ್ತದಾನ ಮಾಡಿದರು!
ಡಾ ಎ ಎನ್ ಪಟವರ್ಧನ್ ಅವರು ಸ್ವರ್ಣವಲ್ಲಿ ಮಠದ ಆಗಿನ ಪೀಠಾಧಿಪತಿ ಸರ್ವೇಜ್ಞೇಂದ್ರ ಸರಸ್ವತೀ ಸ್ವಾಮೀಜಿ ಅವರ ಖಾಸಗಿ ವೈದ್ಯರಾಗಿದ್ದರು. ಸೈಕಲ್, ತೆಪ್ಪ ಹಾಗೂ ಬಂಡಿಗಾಡಿಗಳ ಮೂಲಕ ಸಿದ್ದಾಪುರ-ಯಲ್ಲಾಪುರ ಸೇರಿ ಶಿರಸಿ ಗ್ರಾಮೀಣ ಭಾಗಗಳಿಗೂ ಸಂಚರಿಸಿ ರೋಗಿಗಳ ಆರೈಕೆ ಮಾಡುತ್ತಿದ್ದರು. 1953ರಲ್ಲಿ ಶಿರಸಿಗೆ ಬಂದ ಅವರು ಸುಸಜ್ಜಿತ ಕಟ್ಟಡಗಳಿಲ್ಲದ ಅವಧಿಯಲ್ಲಿ ತಂದೆ ಕಟ್ಟಿಸಿದ್ದ ಧರ್ಮಶಾಲೆಯಲ್ಲಿಯೇ ಹೆರಿಗೆ ಮಾಡಿಸುತ್ತಿದ್ದರು. ಬಡ ಬಾಣಂತಿಯರಿಗೆ ಅಲ್ಲಿಯೇ ಆಶ್ರಯ ಕಲ್ಪಿಸಿದ್ದರು. ಸ್ವರ್ಣವಲ್ಲಿಯ ಆಗಿನ ಸ್ವಾಮೀಜಿ ಅನಾರೋಗ್ಯದ ವೇಳೆ ಮಣಿಪಾಲ್ ಹಾಗೂ ಹುಬ್ಬಳ್ಳಿಗೆ ಹೋದಾಗ ಅವರ ಜೊತೆಗಿದ್ದ ಡಾ ಎ ಎನ್ ಪಟವರ್ಧನ್ ಅಲ್ಲಿಯೂ ಸೇವೆ ಮಾಡಿದರು.
ಡಾ ಎ ಎನ್ ಪಟವರ್ಧನ್ ಅವರು ಅಲೋಪತಿ ಹಾಗೂ ಆಯುರ್ವೇದ ಎರಡರಲ್ಲಿಯೂ ಪರಿಣಿತರಾಗಿದ್ದರು. ಕಾಸು ಇಲ್ಲದವರನ್ನು ಕೀಳರಿಮೆಯಿಂದ ನೋಡದೇ ಚಿಕಿತ್ಸೆ ಕೊಡುತ್ತಿದ್ದರು. ಶಿರಸಿಯಲ್ಲಿ ಮನೋವೈದ್ಯರ ಕೊರತೆಯಿದ್ದ ಸನ್ನಿವೇಶದಲ್ಲಿ ಶಿವಮೊಗ್ಗದ ಮನೋವೈದ್ಯ ಕೆ ಆರ್ ಶ್ರೀಧರ ಅವರಿಗೆ ದುಂಬಾಲು ಬಿದ್ದಿದ್ದರು. `ತಿಂಗಳಿಗೆ ಒಮ್ಮೆಯಾದರೂ ಇಲ್ಲಿ ಬನ್ನಿ’ ಎಂದು ಅವರನ್ನು ಶಿರಸಿಗೆ ಕರೆಯಿಸಿಕೊಳ್ಳುತ್ತಿದ್ದರು. ಹೆರಿಗೆ ಹಾಗೂ ಬಾಣಂತಿ ವಿಷಯದಲ್ಲಿ ತಮಗಿಂತಲೂ ಹೆಚ್ಚಿನ ಅಧ್ಯಯನ ನಡೆಸಿದ ಸ್ತಿçÃರೋಗ ತಜ್ಞರ ಶಾಂತಿ ಹೆಗಡೆ ಅವರನ್ನು ಶಿರಸಿಗೆ ಆಮಂತ್ರಿಸಿದ್ದರು. ಅವರು ಶಿರಸಿಗೆ ಬಂದ ನಂತರ ತಮ್ಮಲ್ಲಿ ಬರುವ ಗರ್ಭಿಣಿಯರನ್ನು ಅವರ ಬಳಿ ಕಳುಹಿಸಿದರು.
ಬಿಡುವಿಲ್ಲದ ವೈದ್ಯಕೀಯ ವೃತ್ತಿಯ ನಡುವೆಯೂ ಅವರು ಸಮಾಜ ಸೇವೆಗೆ ಇಳಿದಿದ್ದರು. ಧಾರಾಕಾರ ಮಳೆಯಿಂದ ಶಿರಸಿಯ ಹೊಸಪೇಟೆ ಶಾಲೆ ಕಟ್ಟಡ ಕುಸಿದಾಗ ಸ್ವಂತ ವೆಚ್ಚದಲ್ಲಿ ಶಾಲೆ ನಿರ್ಮಿಸಿದರು. ವೈದ್ಯಕೀಯ ಸೇವೆಗಾಗಿ ಅವರು ಸೈಕಲ್ ಏರಿ ಹೊರಟರೆ ಮರುದಿನ ಮನೆ ಸೇರಿದ ಉದಾಹರಣೆಗಳು ಸಾಕಷ್ಟಿದ್ದವು. ಆಸ್ಪತ್ರೆಯಲ್ಲಿಯೂ ನಿತ್ಯ ನೂರಾರು ರೋಗಿಗಳಿಗೆ ಕನಿಷ್ಟ ಶುಲ್ಕದೊಂದಿಗೆ ಚಿಕಿತ್ಸೆ ನೀಡುತ್ತಿದ್ದರು. ವಿವಿಧ ಶಿಬಿರ, ವೇದಿಕೆಗಳಲ್ಲಿ ಅವರು ಭಾಗವಹಿಸಿ ನೀಡಿದ ಆರೋಗ್ಯ ಸಲಹೆಗಳು ಲೆಕ್ಕವಿಲ್ಲ.
ಡಾ ಎ ಎನ್ ಪಟವರ್ಧನ್ ಅವರ ಕುಟುಂಬದಲ್ಲಿ ಈಗಲೂ 13 ಜನ ವೈದ್ಯಕೀಯ ಸೇವೆಯಲ್ಲಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 17ರಂದು ನಡೆಯುವ ಅವರ ಜನ್ಮದಿನದ ಅಂಗವಾಗಿ ವೈದ್ಯಕೀಯ ಸಂಘ ರಕ್ತದಾನ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ರೀತಿ ನಿಗದಿತ ದಿನ ನಿರಂತರವಾಗಿ ವೈದ್ಯರೆಲ್ಲ ಸೇರಿ ವೈದ್ಯರೊಬ್ಬರ ನೆನಪಿನಲ್ಲಿ ರಕ್ತದಾನ ಮಾಡುತ್ತಿರುವುದು ಶಿರಸಿ ಬಿಟ್ಟು ಬೇರೆಲ್ಲಿಯೂ ಇಲ್ಲ. ಈ ದಿನ ನಡೆದ ರಕ್ತದಾನದ ವೇಳೆ ಡಾ ಎ ಎನ್ ಪಟವರ್ಧನ್ ಪ್ರತಿಷ್ಠಾನದ ಡಾ ಮುಕುಂದ ಪಟವರ್ಧನ ಅವರು ದತ್ತಿನಿಧಿಗೆ ರೂ 10,000ರೂ ನೀಡಿದರು.
ಡಾ ಎ ಎನ್ ಪಟವರ್ಧನ್ ಅವರು ಹೇಗಿದ್ದರು? ಅವರ ಕುರಿತಾದ ಪುಟ್ಟ ವಿಡಿಯೋ ಇಲ್ಲಿ ನೋಡಿ..