ಯಲ್ಲಾಪುರ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಂಜುನಾಥ ನಗರದ ಸದಸ್ಯ ಸತೀಶ ನಾಯ್ಕ ಚರ್ಚಿಸಿದ್ದಾರೆ. ನೀರು ಪೊಲಾಗದಂತೆ ತಡೆಯುವುದು, ಸೂಕ್ತ ರೀತಿ ನೀರು ಹಂಚಿಕೆ ಹಾಗೂ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತು ಅವರು ಪ ಪಂ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿದರು.
`ಬೇಸಿಗೆಯ ಕಾವು ಹೆಚ್ಚಿದ್ದರಿಂದ ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆ ಬರುವ ಸಾಧ್ಯತೆಯಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ ಮುನ್ನಚ್ಚರಿಕೆವಹಿಸಬೇಕು’ ಎಂದು ಸತೀಶ ನಾಯ್ಕ ಸಭೆಯಲ್ಲಿ ವಿವರಿಸಿದರು. ಈ ವಿಷಯವಾಗಿ ವಿವಿಧ ಸದಸ್ಯರು ಅನೇಕ ಸಲಹೆ ನೀಡಿದರು. ಪಟ್ಟಣದ 19 ವಾರ್ಡುಗಳಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆವಹಿಸುವ ಬಗ್ಗೆ ಚರ್ಚಿಸಲಾಯಿತು.
ಕೊನೆಗೆ ಪಟ್ಟಣ ಪಂಚಾಯತ ಸದಸ್ಯ, ನೀರು ಬಿಡುವ ಸಿಬ್ಬಂದಿ ಹಾಗೂ ಸ್ಥಳೀಯ 5 ಜನರನ್ನು ಸೇರಿಸಿ ಪ್ರತಿ ವಾರ್ಡಿನಲ್ಲಿಯೂ ಸಮಿತಿ ರಚನೆಗೆ ನಿರ್ಣಯಿಸಲಾಯಿತು. ಪಟ್ಟಣದಲ್ಲಿ ನಲ್ಲಿಯಿರದ ಮನೆಗಳನ್ನು ಗುರುತಿಸುವುದು, ಒಡೆದ ಪೈಪುಗಳನ್ನು ಸರಿಪಡಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ಸಮ ಪ್ರಮಾಣದಲ್ಲಿ ನೀರು ಪೂರೈಸುವ ಹೊಣೆಯನ್ನು ಆ ಸಮಿತಿಗೆವಹಿಸುವ ಬಗ್ಗೆ ನಿರ್ಧರಿಸಲಾಯಿತು.
ವಿಷಯದ ಗಂಭೀರತೆ ಅರಿತ ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮೀತ ಅಂಗಡಿ ಹಾಗೂ ಮುಖ್ಯಾಧಿಕಾರಿ ಸುನೀಲ್ ಗಾವಡೆ ನೀರಿನ ಸಮಸ್ಯೆ ಬಗೆಹರಿಸುವ ಠರಾವಿಗೆ ಅನುಮೋದನೆ ನೀಡಿದರು. ಗುರುವಾರದಿಂದಲೇ ಎಲ್ಲಾ ವಾರ್ಡುಗಳಲ್ಲಿ ಸಮಿತಿ ರಚನೆ ಮಾಡುವ ಬಗ್ಗೆ ಒಪ್ಪಿಗೆ ನೀಡಿದರು. ಜೊತೆಗೆ ಪ್ರತಿ 15 ದಿನಗಳಿಗೊಮ್ಮೆ ಪ ಪಂ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು 19 ಸಮಿತಿಯ ಮೇಲ್ವಿಚಾರಣೆ ನಡೆಸುವುದಾಗಿಯೂ ಘೋಷಿಸಿದರು.