ಯಲ್ಲಾಪುರದ ಎಲ್ಐಸಿ ಕಚೇರಿ ಎದುರು ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಅಂಬೇಡ್ಕರ ನಗರದ ಪ್ರಸನ್ನಕುಮಾರ ಜಾದವ್ ಸಾವನಪ್ಪಿದ್ದಾರೆ. ಸ್ನೇಹಜೀವಿಯಾಗಿದ್ದ ಪ್ರಸನ್ನ ಜಾದವ್ ಅಂತಿಮ ದರ್ಶನಕ್ಕೆ ಅಪಾರ ಪ್ರಮಾಣದ ಜನ ಆಗಮಿಸುತ್ತಿದ್ದಾರೆ.
ಯಲ್ಲಾಪುರ ತಾಲೂಕಿನ ಇಡಗುಂದಿಯ ಪ್ರಸನ್ನಕುಮಾರ ಸಂತೋಷ ಜಾದವ್ (24) ಅಂಬೇಡ್ಕರ ನಗರದಲ್ಲಿ ವಾಸವಾಗಿದ್ದರು. ಪೇಂಟಿoಗ್ ಕೆಲಸ ಮಾಡಿಕೊಂಡಿದ್ದ ಅವರು ಅಪಾರ ಪ್ರಮಾಣದಲ್ಲಿ ಸ್ನೇಹಿತರನ್ನು ಹೊಂದಿದ್ದರು. ಸ್ನೇಹಿತರು ಕಷ್ಟದಲ್ಲಿದ್ದಾಗ ರಾತ್ರಿ ವೇಳೆಯಲ್ಲಿಯೂ ಎದ್ದು ಅವರ ನೆರವಿಗೆ ದಾವಿಸುತ್ತಿದ್ದರು. ಯಾವುದೇ ಕೆಲಸವನ್ನಾದರೂ ಲವಲವಿಕೆಯಿಂದ ಮಾಡಿಕೊಡುತ್ತಿದ್ದರು.
ಶುಕ್ರವಾರ ರಾತ್ರಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಹೊರಟಿದ್ದ ಲಾರಿ ಯಲ್ಲಾಪುರ ಪಟ್ಟಣದ ಎಲ್ಐಸಿ ಕಚೇರಿ ಎದುರು ಪ್ರಸನ್ನಕುಮಾರ ಜಾದವ್ ಅವರಿಗೆ ಡಿಕ್ಕಿಯಾಯಿತು. ಡಿಕ್ಕಿಯ ರಭಸಕ್ಕೆ ಬೈಕಿನಿಂದ ಬಿದ್ದ ಪ್ರಸನ್ನ ಜಾದವ್ ನೆಲಕ್ಕೆ ಅಪ್ಪಳಿಸಿದರು. ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿತ್ತು. ಕಾಲಿಗೆ ಸಹ ಗಾಯವಾಗಿದ್ದು, ಅವರು ಮಾತನಾಡುತ್ತಿರಲಿಲ್ಲ. ಕುಟುಂಬದವರು ಪ್ರಸನ್ನಕುಮಾರ ಅವರನ್ನು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಈಗಾಗಲೇ ಪ್ರಸನ್ನಕುಮಾರ ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು.
ಇನ್ನೂ ಲಾರಿಯನ್ನು ಎಡಬದಿಯಿಂದ ಚಲಾಯಿಸದೇ ತೀರಾ ಬಲಕ್ಕೆ ಬಂದು ಬೈಕಿಗೆ ಗುದ್ದಿದ ಪರಿಣಾಮ ಪ್ರಸನ್ನಕುಮಾರ ಸಾವನಪ್ಪಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಮಯ್ಯದ್ ಕೆ ಎಂ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸನ್ನಕುಮಾರ ಜಾದವ್ ಅವರ ಅಕಾಲಿಕ ನಿಧನಕ್ಕೆ ಅವರ ಒಡನಾಡಿಗಳಾಗಿದ್ದ ವಿಜಯ ಮಿರಾಶಿ, ಸಂತೋಷ ನಾಯ್ಕ, ಸತೀಶ ನಾಯ್ಕ, ಶ್ಯಾಮ ರೇವಣಕರ್ ಸಂತಾಪ ಸೂಚಿಸಿದ್ದಾರೆ.