ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್’ಗೆ ಒಟ್ಟು 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ 9.60 ಕೋಟಿ ರೂ ದಂಡ ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಈ ಆದೇಶದಿಂದ ದಿಕ್ಕೆಟ್ಟಿರುವ ಸತೀಶ್ ಸೈಲ್ ಆದೇಶದ ವಿರುದ್ಧ ಮೆಲ್ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.
2010ರಲ್ಲಿ 8 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬೆಲೆಕೇರಿ ಬಂದರಿನಲ್ಲಿ 24 ಗುಡ್ಡಗಳ ರಾಶಿಯಷ್ಟು ಅದಿರನ್ನು ದಾಸ್ತಾನು ಮಾಡಿದ್ದರು. ಇದನ್ನು ಸತೀಶ್ ಸೈಲ್ ಕದ್ದು ತಮ್ಮ ಕಂಪನಿ ಮೂಲಕ ವಿದೇಶಕ್ಕೆ ಸಾಗಿಸಿದ್ದರು. 6 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.
ಅಕ್ಟೊಬರ್ 24ರಂದು ಸತೀಶ್ ಸೈಲ್ ದೋಷಿ ಎಂದು ಘೋಷಿಸಿದ್ದ ನ್ಯಾಯಾಲಯ ಕೂಡಲೇ ವಶಕ್ಕೆ ಪಡೆಯುವಂತೆ ಸೂಚನೆ ನೀಡಿತ್ತು. ಈ ಹಿನ್ನಲೆ ಅದೇ ದಿನ ರಾತ್ರಿ ಸಿಬಿಐ ಅಧಿಕಾರಿಗಳು ಸತೀಶ್ ಸೈಲ್’ರನ್ನು ಬಂಧಿಸಿದ್ದರು. ಇದೀಗ ಅಕ್ರಮ ಅದಿರು ಸಾಗಾಟ ಹಾಗೂ ಅದಿರು ಕಳ್ಳತನ ಪ್ರಕರಣದಲ್ಲಿ ಈ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಬೇಲೆಕೇರಿ ಬಂದರಿನಿAದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬoಧಿಸಿದoತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ತನ್ನ ತೀರ್ಪು ಪ್ರಕಟಿಸಿತು. ನ್ಯಾಯಮೂರ್ತಿ ಗಜಾನನ ಭಟ್ ಅವರು ಈ ಮಹತ್ವದ ಆದೇಶ ಓದಿದರು.
ಈ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್, ಮಹೇಶ್ ಬಿಳಿಯೆ, ಕಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜು ಸೇರಿದಂತೆ ಹಲವರ ವಿರುದ್ಧ ಆರೋಪ ಪಟ್ಟಿಯನ್ನು ಸಿಬಿಐ ದಾಖಲಿಸಿತ್ತು. ಸತೀಶ್ ಸೈಲ್ ಜೊತೆ ಇನ್ನಿತರ 7 ಜನರಿಗೂ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.