ಕುಮಟಾದ ಶಿರಗುಂಜಿಯಲ್ಲಿ ಭೂಮಿ ಖರೀದಿಸಿದ ಕಾರವಾರದ ವಕೀಲ ಗಿರೀಶ ನಾಯ್ಕ ಅಲ್ಲಿನವರ ಜೀವ ಬೆದರಿಕೆಗೆ ನಲುಗಿದ್ದಾರೆ. ತಮ್ಮ ಕ್ಷೇತ್ರದಲ್ಲಿದ್ದ 14 ಸಾಗವಾನಿ ಮರ ಕಳ್ಳತನವಾದ ಬಗ್ಗೆ ಅವರು ನಾಲ್ಕು ತಿಂಗಳ ನಂತರ ಪೊಲೀಸ್ ದೂರು ನೀಡಿದ್ದಾರೆ.
ಕಾರವಾರ ನಂದನಗದ್ದಾ ಬಳಿಯ ನಾಯ್ಕವಾಡದಲ್ಲಿರುವ ಗಿರೀಶ ನಾಯ್ಕ ಕುಮಟಾದ ಶಿರಗುಂಜಿಯಲ್ಲಿ ಐದುವರೆ ಎಕರೆ ಭೂಮಿ ಖರೀದಿಸಿದ್ದಾರೆ. ಆದರೆ, ಆ ಪೈಕಿ 1.4ಎಕರೆ ಭೂಮಿಯನ್ನು ಬೇರೆಯವರು ಅತಿಕ್ರಮಿಸಿದ್ದಾರೆ. ಜೊತೆಗೆ ಅತಿಕ್ರಮಣದಾರರು ಅಲ್ಲಿದ್ದ ಸಾಗವಾನಿ ಮರಗಳನ್ನು ಸಹ ಕಡಿದಿದ್ದಾರೆ.
2024ರ ಅಕ್ಟೊಬರ್ 24ರಂದು ಸಾಗವಾನಿ ಮರ ಕಟಾವು ನಡೆಯುತ್ತಿರುವುದನ್ನು ಗಿರೀಶ ನಾಯ್ಕ ಪ್ರಶ್ನಿಸಿದ್ದರು. ಈ ವೇಳೆ ಉಪ್ಪಿನಪಟ್ಟಣದ ಮಂಜು ಗೌಡ ಹಾಗೂ ಹುಲಿಯಾ ಗೌಡ ಅವರಿಗೆ ಬೆದರಿಕೆ ಒಡ್ಡಿದರು. ಸಾಕಷ್ಟು ಬೈದ ನಂತರ `ಈ ಊರಲ್ಲಿ ನಿನ್ನ ಬೆಂಬಲಕ್ಕೆ ಯಾರೂ ಇಲ್ಲ. ಜೀವಸಹಿತ ಉಳಿಸುವುದಿಲ್ಲ’ ಎಂಬ ಎಚ್ಚರಿಕೆಯನ್ನು ನೀಡಿದರು.
ಈ ಬೆದರಿಕೆಯಿಂದ ನಲುಗಿದ ಗಿರೀಶ ನಾಯ್ಕ ಇಷ್ಟು ದಿನ ಮೌನವಾಗಿದ್ದರು. ಇದೀಗ ಕುಮಟಾ ಉಪ್ಪಿನಪಟ್ಟಣದ ಲಲಿತಾ ಹೆಗಡೆ ಅವರ ಪತಿ ರಾಮಕೃಷ್ಣ ಹೆಗಡೆ ಕುಮ್ಮಕ್ಕಿನಿಂದ ತನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.