ಯಲ್ಲಾಪುರ: ವರ್ಷವಿಡೀ ಬಾಗಿಲು ಹಾಕಿಕೊಂಡಿರುವ ಸಾಹಿತ್ಯ ಭವನವೂ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಹ ಬಾಗಿಲು ತೆರೆಯಲಿಲ್ಲ. ಹೀಗಾಗಿ ಭಾನುವಾರ ಸಂಜೆ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಕಾರ್ ಶೆಡ್ಡಿನಲ್ಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು!
ಆಮಂತ್ರಣ ಪತ್ರಿಕೆ ಬಿಡುಗಡೆಗೆ ಶಾಸಕರ ಬಳಿ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅವರು ಸಮಯ ಪಡೆದಿರಲಿಲ್ಲ. `ಆಮಂತ್ರಣ ಪತ್ರಿಕೆ ತೋರಿಸಿಕೊಂಡು ಹೋಗುವೆ’ ಎಂದು ಸಮಯ ಪಡೆದಿದ್ದ ಅವರು ಕೊನೆಗೆ ಕಾರ್ ಶೆಡ್ಡಿನಲ್ಲಿಯೇ ಅದನ್ನು ಬಿಡುಗಡೆ ಮಾಡಿಸಿದರು. `ಇಲ್ಲಿ ಬೇಡ. ಸಾಹಿತ್ಯ ಭವನ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಗೌರವಯುತವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ’ ಎಂದು ಶಾಸಕರ ಕಚೇರಿಯವರು ಸೂಚಿಸಿದರೂ ಅದನ್ನು ಒಪ್ಪಲಿಲ್ಲ. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಸಾಪ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರರು ಹಾಜರಿರಲಿಲ್ಲ. ಗಡಿಬಿಡಿಯಲ್ಲಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಮಿಷದೊಳಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡರು!
ಮಂಚಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೆ, ಇದಕ್ಕೆ ಬಹುತೇಕ ಕಸಾಪ ಸದಸ್ಯರಿಗೆ ಆಮಂತ್ರಣವಿಲ್ಲ. ವಾಟ್ಸಪ್ ಮೂಲಕ ಆಯ್ದ ವ್ಯಕ್ತಿಗಳಿಗೆ ಮಾತ್ರ ಕರೆಯೋಲೆ ನೀಡಲಾಗಿದ್ದು, ಮುಖತ: ಭೇಟಿ ಆದವರಿಗೂ ಕಾರ್ಯಕ್ರಮಕ್ಕೆ ಕಸಾಪ ಪದಾಧಿಕಾರಿಗಳು ಆಮಂತ್ರಿಸುತ್ತಿಲ್ಲ ಎಂಬ ಆರೋಪವಿದೆ. `ಕಾಸು ಕೊಡುವವರಿಗೆ ಹಾಗೂ ಕಾಸು ಮಾಡಿಕೊಳ್ಳುವವರಿಗೆ ಮಾತ್ರ ತಾಲೂಕು ಕಸಾಪದಲ್ಲಿ ವಿಶೇಷ ಮನ್ನಣೆ’ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.
ಇನ್ನೂ ಈ ಬಾರಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಕೃಷ್ಣ ಭಟ್ಟ ದುಂಡಿ ಅವರು ರಂಗಭೂಮಿ ಕ್ಷೇತ್ರದಲ್ಲಿ ಸಾಧಕರು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರಲ್ಲ. ಯಲ್ಲಾಪುರದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಇನ್ನೊಂದು ಆಕ್ಷೇಪಕ್ಕೆ ಕಾರಣ.
ಶಿವರಾಮ ಹೆಬ್ಬಾರ್ ಅವರು ತಮ್ಮ ಕಾರು ಶೆಡ್ಡಿನಲ್ಲಿ ಕಸಾಪ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವಾಗ ಕ.ಸಾ.ಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಗೌರವ ಕಾರ್ಯದರ್ಶಿ ಜಿ ಎನ್ ಭಟ್ಟ ತಟ್ಟಿಗದ್ದೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು.