ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಏಳು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜಾತ್ರೆ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು. ಮಂಗಳವಾರ ಸಮುದ್ರಯಾನದ ಮೂಲಕ ಜಾತ್ರೆ ಸಂಪನ್ನಗೊoಡಿತು.
`ನೇತ್ರಾಣಿ ಅಡ್ವೆಂಚರ್’ ಅವರ ದೋಣಿಯಲ್ಲಿ ಶಿವನ ಮೂರ್ತಿಯ ಸಮುದ್ರಯಾನ ನಡೆಯಿತು. ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜೈರಾಮ್ ಅಡಿ, ಸದಾನಂದ ಭಟ್ಟ, ಗೋಪಾಲ ಭಟ್ಟ ಹಾಗೂ ಊರಿನ ಪ್ರಮುಖರನ್ನು ಕರೆದೊಯ್ದ ದೋಣಿ ಸಮುದ್ರದಲ್ಲಿ ಸಂಚರಿಸಿತು. ಕಳೆದ 10 ವರ್ಷಗಳಿಂದ ನೇತ್ರಾಣಿ ಗಣೇಶ ಅವರು ಅತ್ಯಂತ ಶೃದ್ಧಾಭಕ್ತಿಯಿಂದ ಸಮುದ್ರಯಾನ ಸೇವೆ ಮಾಡುತ್ತ ಬಂದಿದ್ದು, ಈ ವರ್ಷವೂ ಅವರು ತಮ್ಮ ಸೇವೆಯನ್ನು ಮುಂದುವರೆಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಮಣದoದು ಜಾತ್ರೆಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಶುರುವಾದವು. ಪ್ರಥಮ ದಿನ ಬೀಜವಾಹನ, ಮಯೂರ ಯಂತ್ರೋತ್ಸವ, ಗಜ ಯಂತ್ರೋತ್ಸವ, ವೃಷಭ ಯಂತ್ರೋತ್ಸವ, ಡೋಲಾ ಯಂತ್ರೋತ್ಸವ ನಡೆಯಿತು. ಜ 19ರಂದು ಬೆಳಿಗ್ಗೆ ಶ್ರೀ ದೇವರ ರಥಾರೋಹಣ ಕಾರ್ಯದೊಂದಿಗೆ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಸಂಜೆ ಮಹಾರಥೋತ್ಸವ ಜರುಗಿತು. ಸಂಜೆ ಮೃಗಬೇಟೆ, ಮುಡಿಗಂಧ ಪ್ರಸಾದ ವಿರತಣೆ ನಡೆಯಿತು. ಜ 21ರಂದು ಚೂರ್ಣೋತ್ಸವ, ಅವಭೃಥ ಸ್ನಾನ, ಧ್ವಜಾವರೋಹಣ, ಅಂಕುರಾರೋಪಣ, ಮಹಾಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರೆ ಸಂಪನ್ನಗೊoಡಿತು.