ಭಟ್ಕಳ: ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸಿದ್ದ ಬಾಲಕ ಬಾವಿಗೆ ಬಿದ್ದು ಸಾವನಪ್ಪಿದ್ದು, ಶವವನ್ನು ಮೇಲೆತ್ತಲಾಗಿದೆ. ಬುಧವಾರ ಸಂಜೆ ಭಟ್ಕಳ ತಾಲೂಕು ಪಂಚಾಯತ ಹಿಂದಿನ ತೆರದ ಬಾವಿಗೆ ಬಿದ್ದು ನಿರುಪಾದಿ ಹರಿಜನ್ ಎಂಬಾತರು ಕೊನೆ ಉಸಿರೆಳೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಗಾಣದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಸಾವನಪ್ಪಿದವರು. ತಾಲೂಕು ಪಂಚಾಯತ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆ ಹೋದಾಗ ಈ ಅವಘಡ ನಡೆದಿದೆ. ಗಾಣದಾಳ ಶಾಲೆಯ 100 ವಿದ್ಯಾರ್ಥಿಗಳು ಜೋಗ ಫಾಲ್ಸ್ ವೀಕ್ಷಣೆ ನಡೆಸಿ ಕೊಲ್ಲೂರು ಕಡೆ ಹೊರಟಿದ್ದರು. ಎರಡು ಬಸ್ಸುಗಳಲ್ಲಿ ಬಂದ್ದ ಮಕ್ಕಳ ಜೊತೆ 13 ಶಿಕ್ಷಕರು ಇದ್ದರು.
ಮಂಗಳವಾರ ರಾತ್ರಿ ಗಾಣದಾಳದಿಂದ ಹೊರಟಿದ್ದ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ ಜೋಗ ಜಲಪಾತ ವೀಕ್ಷಿಸಿದ್ದರು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಅರಬೈಲ್ ಘಟ್ಟದ ಮೂಲಕ ಹೊನ್ನಾವರ ಮಾರ್ಗವಾಗಿ ತೆರಳುತ್ತಿದ್ದರು. ಮಾರ್ಗ ಮಧ್ಯ ಭಟ್ಕಳದಲ್ಲಿ ಮಾತ್ರೆ ಖರೀದಿಗಾಗಿ ನಿಲ್ಲಿಸಲಾಗಿತ್ತು. ತಾಲೂಕು ಪಂಚಾಯತ್ ಕಚೇರಿ ಎದುರಿನ ಔಷಧಿ ಅಂಗಡಿಯಲ್ಲಿ ಕೆಲವರು ಮಾತ್ರೆ ಖರೀದಿಸುವಾಗ ನಿರುಪಾದಿ ಹರಿಜನ ಮೂತ್ರ ವಿಸರ್ಜನೆಗೆ ಹೋಗಿದ್ದರು.
ಈ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಬಾಲಕ ಬಿದ್ದಿದ್ದು, ಜೊತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿದರು. ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬಾಲಕನನ್ನು ಮೇಲೆತ್ತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.