ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳ ಮೂಲಕ ಸ್ಕೋಡ್ವೆಸ್ ಸಂಸ್ಥೆ ಕೊಡಿಸಿದ್ದ ಹಣವನ್ನು ಅದೇ ಸಂಸ್ಥೆಯ ಮಹಿಳಾ ಉದ್ಯೋಗಿ ಲಪಟಾಯಿಸಿದ್ದಾರೆ.
ಸ್ಕೋಡ್ವೆಸ್ ಸಂಸ್ಥೆ ಮೂಲಕ ಸ್ವ ಸಹಾಯ ಸಂಘಗಳಿಗೆ ಸಾಲ ಕೊಡಿಸಲಾಗಿತ್ತು. ಈ ಸಾಲವನ್ನು ವಸೂಲಿ ಮಾಡಿ ಬ್ಯಾಂಕಿಗೆ ಪಾವತಿಸುವ ಹೊಣೆಯನ್ನು ಸ್ಕೋಡ್ವೆಸ್ ನಾಗರತ್ನ ಗೌಡ ಅವರಿಗೆ ವಹಿಸಿತ್ತು. ನಾಗರತ್ನ ಗೌಡ ಅವರು ಸಾಲಗಾರರ ಬಳಿ ತೆರಳಿ ಸಂಸ್ಥೆಯ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಹೇಳಿದ್ದರು. ಆ ನಿಯಮಗಳನ್ನು ಬಳಸಿಕೊಂಡು ಅವರು ಸಾಲ ವಸೂಲಿ ಮಾಡಿದ್ದರು. ಆದರೆ, ಆ ಸಾಲದ ಕಂತನ್ನು ಬ್ಯಾಂಕಿಗೆ ಮರುಭರಣ ಮಾಡುವಾಗ ನಿಯಮ ಪಾಲನೆ ಮಾಡಲು ಮರೆತಿದ್ದರು.
ನಕಲಿ ದಾಖಲೆ ಸೃಷ್ಠಿಸಿದ ನಾಗರತ್ನ ಗೌಡ ಸಹಿಯನ್ನು ಫೋರ್ಜರಿ ಮಾಡಿ ಆ ಹಣವನ್ನು ತನ್ನ ಪತಿ ಪ್ರಭಾಕರ್ ಗೌಡ ಅವರ ಖಾತೆಗೆ ವರ್ಗಾಯಿಸಿದ್ದರು. ಒಟ್ಟು 9,98797 ರೂ ಹಣ ಲಪಟಾಯಿಸಿದ್ದು, ಇದಕ್ಕೆ ಸತೀಶ ಕೆ ಮರಾಠಿ ಸಹ ಸಹಕಾರ ನೀಡಿದ್ದರು. ಈ ವಿಷಯ ಅರಿತ ಸ್ಕೋಡ್ವೆಸ್ ಸಂಸ್ಥೆಯವರು ಆಂತರಿಕ ವಿಚಾರಣೆ ನಡೆಸಿದ್ದರು. ಈ ವೇಳೆ ನಾಗರತ್ನ ಗೌಡ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದರು.
ಆ ವೇಳೆ ಎಲ್ಲಾ ಹಣವನ್ನು 2024ರ ಡಿಸೆಂಬರ್ 12ರ ಒಳಗೆ ಮರುಭರಣ ಮಾಡುವುದಾಗಿ ನಾಗರತ್ನ ಗೌಡ ಮಾತು ಕೊಟ್ಟಿದ್ದರು. ಈ ಹಿನ್ನಲೆ ಸ್ಕೋಡ್ವೆಸ್ ಸಂಸ್ಥೆಯವರು ಮೌನವಾಗಿದ್ದು, ಹಣ ಮರು ಪಾವತಿಗೆ ಸಮಯ ಕೊಟ್ಟಿದ್ದರು. ಆದರೆ, ಫೆ 19ರಂದು ಸಹ ಹಣ ಮರು ಪಾವತಿ ಆಗದ ಕಾರಣ ಸ್ಕೋಡ್ವೆಸ್ನವರು ಅನಿವಾರ್ಯತೆಗೆ ಸಿಲುಕಿದರು. ಹಣ ಮರುಪಾವತಿಗಾಗಿ ಸ್ಕೋಡ್ವೆಸ್ ಸಿಬ್ಬಂದಿ ನಾಗರತ್ನ ಅವರ ಮನೆಗೆ ಹೋದಾಗ ಜೀವ ಬೆದರಿಕೆಯನ್ನು ಸಹ ಅನುಭವಿಸಿದರು.
ಈ ಎಲ್ಲಾ ವಿಷಯ ಅರಿತ ಸ್ಕೋಡ್ವೆಸ್ ಮುಖ್ಯಸ್ಥ ವೆಂಕಟೇಶ ನಾಯ್ಕ ಸರಸ್ವತಿ ಗೌಡ ಜೊತೆ ಆಕೆಯ ಪತಿ ಪ್ರಭಾಕರ ಗೌಡ ಹಾಗೂ ಸತೀಶ ಮರಾಠಿ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ದೂರು ದಾಖಲಿಸಿದರು. ಪಿಎಸ್ಐ ರತ್ನಾ ಕುರಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.