ಚಲಿಸುತ್ತಿದ್ದ ಸ್ಕೂಟಿ ಡಿವೈಡರ್’ಗೆ ಗುದ್ದಿದ ಪರಿಣಾಮ ಪಕ್ಕದ ಕಾಲುವೆಗೆ ಬಿದ್ದು ಹೆಸ್ಕಾಂ ಸಿಬ್ಬಂದಿಯೊಬ್ಬರು ಸಾವನಪ್ಪಿದ್ದಾರೆ.
ಕಾರವಾರದ ಕಡವಾಡ ಬಳಿಯ ಹಳೆಕೋಟದ ಮನೋಜ ಗೌಡ (48) ಅವರು ಕುಮಟಾದಲ್ಲಿ ಲೈನ್ಮೆನ್ ಆಗಿದ್ದರು. ಫೆಬ್ರವರಿ 1ರಂದು ಅವರು ಅಂಕೋಲಾದಿAದ ಕಾರವಾರ ಕಡೆ ಸ್ಕೂಟಿ ಓಡಿಸಿಕೊಂಡು ಹೊರಟಿದ್ದರು. ಹಾರವಾಡ ಗ್ರಾಮದ ಬಳಿ ಸ್ಕೂಟಿಯ ಮೇಲಿನ ನಿಯಂತ್ರಣ ಕಳೆದುಕೊಂಡ ಅವರು ಡಿವೈಡರ್’ಗೆ ವಾಹನ ಗುದ್ದಿದರು.
ಪರಿಣಾಮ ಮನೋಜ ಗೌಡ ಅವರು ರಸ್ತೆ ಪಕ್ಕದ ಕಾಲುವೆಗೆ ಹಾರಿ ಬಿದ್ದರು. ಸೊಂಟ, ಕೈ, ತಲೆ ಹಾಗೂ ಹೊಟ್ಟೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಕಾಲುವೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಅವರನ್ನು ಸ್ಥಳೀಯರು ಉಪಚರಿಸಿದರು. ಅದಾದ ನಂತರ ಚಿಕಿತ್ಸೆಗಾಗಿ ಅಂಕೋಲಾದ ಆಸ್ಪತ್ರೆಗೆ ಕರೆದೊಯ್ದರು.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು `ಈಗಾಗಲೇ ಮನೋಜ ಗೌಡ ಸಾವನಪ್ಪಿದ್ದಾರೆ’ ಎಂದು ಘೋಷಿಸಿದರು. ಮನೋಜ ಅವರ ಪತ್ನಿ ತಾರಾ ಗೌಡ ಅವರು ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.