ಕಾರವಾರ: ಭಾರತೀಯ ನೌಕಾನೆಲೆಯೊಳಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಇಲ್ಲಿನ ರಹಸ್ಯಗಳನ್ನು ವಿದೇಶಿ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ನೌಕಾನೆಲೆಯ ಫೋಟೋ-ಮಾಹಿತಿಯನ್ನು ಅವರು ಹರಿಬಿಟ್ಟು ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಈ ಹಿನ್ನಲೆ ಅಂಥ ಮೂವರು ದೇಶದ್ರೋಹಿಗಳನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2023ರಲ್ಲಿ ಹೈದರಾಬಾದಿನಲ್ಲಿ ದೀಪಕ್ ಎಂಬಾತನನ್ನು ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದು, ಆತನ ವಿಚಾರಣೆ ವೇಳೆ ಕಾರವಾರದ ಸೀಬರ್ಡ ನೌಕಾನೆಲೆಯಲ್ಲಿನ ಮಾಹಿತಿಯೂ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಆತ ನೀಡಿದ ಮಾಹಿತಿ ಪ್ರಕಾರ ತೋಡೂರಿನ ಸುನೀಲ ನಾಯ್ಕ, ಮುದುಗಾದ ವೇತನ ತಾಂಡೇಲ, ಹಳವಳ್ಳಿಯ ಅಕ್ಷಯ ನಾಯ್ಕ ಎಂಬಾತರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರ ಬಳಿಯಿದ್ದ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಸಹ ಜಪ್ತುಪಡಿಸಿಕೊಂಡಿದ್ದಾರೆ.
ಇವರೆಲ್ಲರೂ ಭಾರತೀಯ ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ಪೈಕಿ ಸುನೀಲ ನಾಯ್ಕ ಹಾಗೂ ವೇತನ ತಾಂಡೇಲ್ ಎಂಬಾತರನ್ನು ನೌಕಾನೆಲೆಯೊಳಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಕ್ಷಯ ನಾಯ್ಕ ನೌಕಾನೆಲೆ ಕೆಲಸ ಬಿಟ್ಟು ಗೋವಾದ ಕ್ಯಾಂಟಿನ್ವೊoದರಲ್ಲಿ ದುಡಿಯುತ್ತಿದ್ದು, ಆತನನ್ನು ಅಲ್ಲಿ ಬಂಧಿಸಿದ್ದಾರೆ.