ಆ ಮೂವರಿಗೂ ನೌಕಾನೆಲೆಯಲ್ಲಿ ಉತ್ತಮ ವೇತನ ಸಿಗುತ್ತಿತ್ತು. ಆದರೂ, ಮೂರು ಕಾಸಿನ ಲಂಚದ ಆಸೆಗೆ ಅವರು ಭಾರತೀಯ ನೌಕಾಸೇನೆಯ ಮಾಹಿತಿಗಳನ್ನು ಶತ್ರು ದೇಶಗಳಿಗೆ ರವಾನಿಸುತ್ತಿದ್ದರು. ಈ ಹಿನ್ನಲೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ನೋಟಿಸ್ ನೀಡಿ ಅವರನ್ನು ಬಿಡುಗಡೆ ಮಾಡಿದ್ದು, ಆರೋಪಿತರ ಚಲನ-ವಲನದ ಮೇಲೆ ನಿಗಾ ಇರಿಸಿದ್ದಾರೆ.
ಕದಂಬ ನೌಕಾನೆಲೆಯ ಶಿಪ್ ರಿಪೇರ್ ಯಾರ್ಡಿನಲ್ಲಿ ಕಾರವಾರ ಮುದಗಾದ ವೇತನ ತಾಂಡೇಲ, ಅಂಕೋಲಾ ಹಳವಳ್ಳಿಯ ಅಕ್ಷಯ ನಾಯ್ಕ ಹಾಗೂ ಅರಗಾದ ಸುನೀಲ ನಾಯ್ಕ ಕೆಲಸ ಮಾಡುತ್ತಿದ್ದರು. ಈ ಪೈಕಿ ಸುನೀಲ ನಾಯ್ಕ ಸದ್ಯ ಗೋವಾದಲ್ಲಿ ಉದ್ಯೋಗದಲ್ಲಿದ್ದು, ಅಕ್ಷಯ ನಾಯ್ಕ ಹಾಗೂ ವೇತನ ತಾಂಡೇಲ ನೌಕಾಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಅಕ್ಷಯ ಎಂಬಾತನನ್ನು ಸ್ಥಳದಲ್ಲೇ ವಿಚಾರಣೆ ಮಾಡಿದ್ದು, ವೇತನ ತಾಂಡೇಲನನ್ನು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದು NIA ಡಿವೈಎಸ್ಪಿ ಹಾಗೂ ಮೂವರು ಇನ್ಸೆಕ್ಟರ್ಗಳು ಬುಧವಾರ ಮಧ್ಯಾಹ್ನದಿಂದ ಸಾಯಂಕಾಲದವರೆಗೂ ವಿಚಾರಣೆ ನಡೆಸಿದರು.
ನೌಕಾಸೇನೆಯ ಮಾಹಿತಿಗಳನ್ನು ಪಾಕಿಸ್ತಾನಿ ಗುಪ್ತಚರಕ್ಕೆ ನೀಡುತ್ತಿದ್ದ ಆರೋಪದ ಮೇಲೆ 2023ರ ಮೇ ಮಾಸದಲ್ಲಿ ಆಂಧ್ರ ಪ್ರದೇಶದ ವಿಜಯವಾಡಾ ಗುಪ್ತಚರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಪ್ರಕರಣ ಎನ್ಐಎಗೆ ಹಸ್ತಾಂತರವಾಗಿತ್ತು. ಅದರ ಬೆನ್ನತ್ತಿದ ತನಿಖಾ ದಳದ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಅಶೋಕ ಸೋಲಂಕಿ ಹಾಗೂ ಮೀರ್ ಭಜಲ್ ಖಾನ್ ಎಂಬಾತರು ಸಿಕ್ಕಿಬಿದ್ದಿದ್ದರು. ನೌಕಾಸೇನೆಯ ವಿಶಾಖಾಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ ಸೋಲಂಕಿ ನೌಕಾಸೇನೆಯ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್ ಮೀರ್ ಭಲಜ್ ಖಾನ್ ಕಳಿಸಿದ್ದ. ಅದಕ್ಕಾಗಿ ಹಣವನ್ನೂ ಪಡೆದಿದ್ದ.
ಇದನ್ನೂ ಓದಿ: ದಾರಿ ತಪ್ಪಿದ NIA ಅಧಿಕಾರಿಗಳು!
ಇದೇ ತನಿಖೆ ಮುಂದುವರಿಸಿದ ಎನ್ಐಎ ಮುಂಬೈನ ಮನಮೋಹನ ಸುರೇಂದ್ರ ಪಾಂಡಾ ಎಂಬಾತನ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿತ್ತು. ಅಲ್ಲದೇ ಕಳೆದ ಮೇ ತಿಂಗಳಲ್ಲಿ ಅಮ್ಮನ್ ಸಲೀಂ ಶೇಖ್ ಎಂಬಾತನ ವಿರುದ್ಧ ವಿಶಾಖಪಟ್ಟಣ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೇ ಪ್ರಕರಣ ವಿಚಾರಣೆ ಮುಂದುವರಿದು ಕಾರವಾರದ ಮೂವರ ಬಗ್ಗೆ ವಿಚಾರಣೆ ನಡೆದಿದೆ.
ಇಲ್ಲಿನ ಮೂವರು ಆರೋಪಿತರಿಗೆ ಮುಂಬೈನಿ0ದ ಕರೆ ಮಾಡುತ್ತಿದ್ದ ವ್ಯಕ್ತಿ ಹಡಗುಗಳ ಮಾಹಿತಿ ಕೇಳುತ್ತಿದ್ದ. ಮಾಹಿತಿ ನೀಡಿದ್ದಕ್ಕಾಗಿ ಅವರ ಖಾತೆಗೆ ಹಣ ಹಾಕುತ್ತಿದ್ದ ಎಂದು ಗೊತ್ತಾಗಿದೆ.