ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಜೋಗ ಜಲಪಾತದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದವರಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಬಿಸಿ ಮುಟ್ಟಿಸಿದ್ದಾರೆ.
ಶುಕ್ರವಾರ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅದರಲ್ಲಿ ಕೆಲವರು ಅಲ್ಲಿ ಅಳವಡಿಸಲಾದ ಗೇಟ್ ಹಾರಿ ಮುಂದೆ ಚಲಿಸಿದ್ದರು. ಅಪಾಯಕಾರಿ ಪ್ರದೇಶದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದವರಿಗೆ ಅಪರ ಜಿಲ್ಲಾಧಿಕಾರಿ ಕ್ಲಾಸ್ ತೆಗೆದುಕೊಂಡರು.
ಪ್ರವಾಸಿಗರಿಗೆ ಅಪಾಯ ಆಗದಂತೆ ತಡೆಯಲು ಅಲ್ಲಿ ಕಬ್ಬಿಣದ ಗೇಟ್ ಅಳವಡಿಸಲಾಗಿದೆ. ಗೇಟ್ ದಾಟಿ ಮುಂದೆ ಹೋಗದಂತೆ ಸೂಚಿಸಲಾಗಿದೆ. ಅದಾಗಿಯೂ ಕೆಲವರು ತಮ್ಮ ಸಾಹಸ ಪ್ರದರ್ಶನಕ್ಕಾಗಿ ಅಪಾಯದ ಕಡೆ ಹೋಗುತ್ತಿದ್ದಾರೆ. ಕಬ್ಬಿಣದ ಗೇಟ್ ಅಳವಡಿಸಿ ಬಂದ್ ಮಾಡಿದ್ದರೂ ಅಪಾಯಕಾರಿ ಸ್ಥಳಕ್ಕೆ ತೆರಳಿ ಫೋಟೋ ಹೊಡೆಯುತ್ತಿದ್ದ ಪ್ರವಾಸಿಗರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಸಿದ್ದಾಪುರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಜೋಗ ಜಲಪಾತದ ಕೆಳಗಿನ ಗೇಟ್ನ್ನು ಬಂದ್ ಮಾಡಿರುವುದನ್ನು ಗಮನಿಸಿದರು. `ಗೇಟ್ ಬಂದ್ ಇದ್ದರೂ ಕೆಲವರು ಅಲ್ಲಿ ಹೋಗಿರುವುದು ಹೇಗೆ?’ ಎಂದು ಅಲ್ಲಿದ್ದವರನ್ನು ಪ್ರಶ್ನಿಸಿದರು. `ಗೇಟ್ ಹಾರಿ ಮುಂದೆ ಹೋಗಿದ್ದೇವೆ’ ಎಂದು ಯುವಕರು ಉತ್ತರಿಸಿದ್ದು, ಆ ವೇಳೆ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.