ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಬರುತ್ತಿದ್ದ ನಾಲ್ವರಿಗೆ ಅಂಕೋಲಾದ ಹೊಸಕಂಬಿ ಬಳಿ ಹೆಜ್ಜೇನು ದಾಳಿ ನಡೆಸಿದೆ. ಸೋಮವಾರ ಸಂಜೆ ನಡೆದ ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು ಆಸ್ಪತ್ರೆ ಸೇರಿದ್ದಾರೆ.
ಹುಬ್ಬಳ್ಳಿಯ ನಾಲ್ವರು ಸ್ನೇಹಿತರು ಸೋಮವಾರ ಮಧ್ಯಾಹ್ನ ಗೋಕರ್ಣ ಪ್ರವಾಸದ ಯೋಜನೆ ರೂಪಿಸಿದ್ದರು. ಅದರಂತೆ ಕಾರಿನಲ್ಲಿ ಹೊರಟ ಅವರು ರಸ್ತೆ ಮದ್ಯೆ ಮೋಜು-ಮಸ್ತಿ ಮಾಡುತ್ತ ಹೊಸಕಂಬಿ ಮಾರ್ಗ ಪ್ರವೇಶಿಸಿದರು. ಅಂಕೋಲಾ ತಾಲೂಕಿನ ಹೊಸಾಕಂಬಿ ಸೇತುವೆ ಬಳಿ ತಮ್ಮ ವಾಹನ ನಿಲ್ಲಿಸಿ ಕಾಡಿನ ಫೋಟೋ ತೆಗೆದರು. ಜೊತೆಗೆ ಒಂದಷ್ಟು ಸೆಲ್ಪಿ ಕ್ಲಿಕ್ಕಿಸಿಕೊಂಡರು.
ಮೊಬೈಲ್ ಕ್ಯಾಮರಾ ಬೆಳಕಿಗೆ ಅಲ್ಲಿದ್ದ ಜೇನು ಹುಳುಗಳು ರೊಚ್ಚಿಗೆದ್ದವು. ಬೆಳಕಿನ ಕಡೆ ಧಾವಿಸಿದ ಜೇನು ದುಂಬಿಗಳು ನಾಲ್ವರ ಮೇಲೆ ಆಕ್ರಮಣ ನಡೆಸಿದವು. ಆಗ, ಎಲ್ಲರೂ ಸೇರಿ ಓಡಿದ್ದು, ಒಂದುವರೆ ಕಿಮೀ ದೂರದವರೆಗೂ ಜೇನು ಹುಳಗಳು ಬೆನ್ನಟ್ಟಿದವು. ಅದಾಗಿಯೂ ಒಬ್ಬರು ಕಾರು ಏರಿ ರಸ್ತೆಯ ಕಡೆ ಚಲಿಸಿದರು. ಎಲ್ಲರನ್ನು ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆ ಹುಡುಕಲು ಶುರು ಮಾಡಿದರು.
ಅಷ್ಟರಲ್ಲಿಯೇ ಸಾಕಷ್ಟು ಪೆಟ್ಟು ತಿಂದಿದ್ದ ಹುಬ್ಬಳ್ಳಿಯ ಆದರ್ಶ ಕಳಸೂರ ನೋವಿನಿಂದ ಸಾವನಪ್ಪಿದರು. ಉಳಿದ ಮೂವರಲ್ಲಿ ಗಗನದೀಪ ಜಂಟಾಲ್ ಎಂಬಾತರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅದಾದ ನಂತರ ಜೇನು ದಾಳಿಯಿಂದ ತತ್ತರಿಸಿದವರನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಉಪಚಾರ ಮಾಡಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡವರನ್ನು ಕುಮಟಾ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.