ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ `ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ’ ನಿರ್ಗತಿಕರ ಸೇವೆಗಾಗಿ ಶ್ರಮಿಸುತ್ತಿದೆ. ಅನಾಥ ಮಕ್ಕಳ ರಕ್ಷಣೆ, ವೃದ್ಧ ಪಾಲಕರಿಗೆ ಆಸರೆ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಿಕೆ ಸೇರಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವುದು ಈ ಸಂಸ್ಥೆಯ ಮೂಲ ಉದ್ದೇಶ. ಅಧಿಕಾರಿಗಳ ಅಸಡ್ಡೆ, ಪೊಲೀಸರ ದುರ್ವರ್ತನೆ ಸೇರಿ ಹಲವು ಹೋರಾಟಗಳಿಗಾಗಿ ಅವರು ಹೈಕೋರ್ಟಿನವರೆಗೂ ಹೋರಾಟ ನಡೆಸಿದ್ದಾರೆ.
`ಆರು ಜನ ಸಮಾನ ಮನಸ್ಕರು ಸೇರಿ ಈ ಸಂಸ್ಥೆ ನಡೆಸುತ್ತಿದ್ದು, ಅಂಗವಿಕಲ ವ್ಯಕ್ತಿಯೊಬ್ಬರಿಗೆ ಉದ್ಯೋಗ ನೀಡಿ ಸಂಸ್ಥೆ ಸಹಾಯವಾಣಿಯನ್ನು ತೆರೆದಿದೆ. ಕಾರವಾರದಲ್ಲಿ 2 ವರ್ಷಗಳ ಕಾಲ ಕಚೇರಿ ನಡೆಸಲಾಗಿದ್ದು, ನಂತರ ಕುಮಟಾ ಕೇಂದ್ರವನ್ನಾಗಿಸಿಕೊ0ಡು 100ಕ್ಕೂ ಅಧಿಕ ಜನರಿಗೆ ಸಂಸ್ಥೆಯವರು ನ್ಯಾಯ ಕೊಡಿಸಿದ್ದಾರೆ. ಜನರಿಂದ ಅವರು ಈವರೆಗೆ ಬಿಡಿಗಾಸು ಪಡೆದಿಲ್ಲ. ಸಂಸ್ಥೆಯ ಎಲ್ಲಾ ಸೇವೆಗಳು ಸಂಪೂರ್ಣ ಉಚಿತ!
ಮುಖ್ಯವಾಗಿ ಅನಾಥ ಹಾಗೂ ವೃದ್ಧರ ಸೇವೆಗೆ ಹೆಚ್ಚಿನ ಆದ್ಯತೆ ನೀಡುವ ಈ ಸಂಸ್ಥೆ ಇನ್ನಿತರ ವಿಷಯಗಳಲ್ಲಿ ಅನ್ಯಾಯಕ್ಕೆ ಒಳಗಾದವರ ಕಾನೂನು ಹೋರಾಟಕ್ಕೂ ನೆರವು ನೀಡುತ್ತದೆ. ಆಸ್ಪತ್ರೆಗಳಲ್ಲಿನ ದುಬಾರಿ ವೆಚ್ಚ, ಬಡವರಿಂದ ಹಣ ವಸೂಲಿ, ರೋಗಿಗಳಿಗೆ ಸೂಕ್ತ ಸೇವೆ ಒದಗಿಸದಿರುವಿಕೆ ಸೇರಿ ಎಲ್ಲಾ ಬಗೆಯ ಹೋರಾಟಗಳನ್ನು ಈ ಸಂಸ್ಥೆ ಮಾಡಿದೆ. ನ್ಯಾಯಾಲಯಗಳಲ್ಲಿರುವ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜನರಿಗೆ ಅರಿವು ಮೂಡಿಸುವುದು ಸಂಸ್ಥೆಯ ಮತ್ತೊಂದು ಕೆಲಸ. 2018ರಿಂದಲೂ ಸ್ಪಲಿನತೆ ಎಂಬ ಮಾನಸಿಕ ಒತ್ತಡಕ್ಕೆ ಒಳಗಾದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ತರಬೇತಿ ನೀಡುತ್ತದೆ.
`ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧೆಯೊಬ್ಬರು ಶೋಚನೀಯ ಸ್ಥಿತಿಯಲ್ಲಿದ್ದರು. ಅನಾಥ ಮಗುವಿಗೆ ಶಿಕ್ಷಣ ನೀಡಿ ಬೆಳೆಸಿದ್ದ ಅವರು ಆ ವ್ಯಕ್ತಿಯಿಂದಲೇ ನಿರ್ಲಕ್ಷö್ಯಕ್ಕೆ ಒಳಗಾಗಿದ್ದರು. ಆ ವೃದ್ಧೆಯನ್ನು ಆಕೆ ಸಾಕಿದ ಪುತ್ರನ ಜೊತೆ ಸೇರಿಸಿದ ಒಂದು ತಿಂಗಳಿಗೆ ವೃದ್ಧೆ ಸಾವನಪ್ಪಿರುವ ಸುದ್ದಿ ಕೇಳಿ ಆಘಾತವಾಗಿದ್ದು, ನೊಂದವರಿಗೆ ನೆರವು ನೀಡುವುದಕ್ಕಾಗಿ ಜಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಸ್ಥಾಪಿಸಲಾಯಿತು’ ಎಂದು ಸಂಸ್ಥೆಯ ಮುಖ್ಯಸ್ಥ ಆಗ್ನೇಲ್ ರೋಡ್ರಿಗ್ರಿಸ್ ತಿಳಿಸಿದರು.
` ಸಂಸ್ಥೆಯ ಎಲ್ಲಾ ಸದಸ್ಯರು ಬೇರೆ ಬೇರೆ ಉದ್ಯೋಗ ಹಾಗೂ ವ್ಯವಹಾರದಲ್ಲಿ ತೊಡಗಿದ್ದು, ತಮ್ಮ ಆದಾಯದ ಒಂದು ಭಾಗವನ್ನು ಸೇವೆಗೆ ಮೀಸಲಿರಿಸಿದ್ದಾರೆ. ತಾವು ಸಮಾಜಕ್ಕಾಗಿ ಮೀಸಲಿಡುವ ಹಣವನ್ನು ದೇವರು ದುಪ್ಪಟ್ಟು ಪ್ರಮಾಣದಲ್ಲಿ ನೀಡುತ್ತಿದ್ದು, ಈ ಕೆಲಸದಲ್ಲಿ ಖುಷಿಯಿದೆ’ ಎಂದು ಸಂಸ್ಥೆಯ ಸುಧಾಕರ ನಾಯ್ಕ ಅನುಭವ ಹಂಚಿಕೊoಡರು.
ಕುಮಟಾ ಮಾಸೂರು ಕ್ರಾಸಿನ ಜನತಾ ಪ್ಲಾಟಿನಲ್ಲಿ ಬೆಳಗ್ಗೆ 10 ಗಂಟೆಯಿ0ದ ಸಂಜೆ 5.30ರವರೆಗೆ ಸಂಸ್ಥೆಯ ಕಚೇರಿ ತೆರೆದಿರುತ್ತದೆ. ಸಂಸ್ಥೆಯ ಸಹಾಯವಾಣಿ ಸಂಖ್ಯೆ: 8197359244