ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಿಸಲಕೊಪ್ಪ ಮೂಲದ ಅನಘಾ ಹೆಗಡೆ ದಕ್ಷಿಣ ಕನ್ನಡ ಜಿಲ್ಲೆಯ ಭರತನಾಟ್ಯದಲ್ಲಿ ಹೆಸರು ಮಾಡುತ್ತಿದ್ದಾರೆ. ಕಾಂತಾರಾ ಚಿತ್ರದ ಮಾನಸಿ ಸುಧೀರ ಅವರಲ್ಲಿ ಭರತನಾಟ್ಯ ಕಲಿತ ಅವರು ರಾಜ್ಯದ ನಾನಾ ಭಾಗದಲ್ಲಿನ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಅನಘಾ ಹೆಗಡೆ ಉದ್ಯಮಿ ಎಲ್.ಎಂ. ಹೆಗಡೆ ಹಾಗೂ ವಿದ್ಯಾ ಹೆಗಡೆ ಅವರ ಪುತ್ರಿ. ಉಡುಪಿಯ ಎಂಜಿಎA ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲಿಯೇ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು 6ನೇ ವಯಸ್ಸಿನಲ್ಲಿ ನೃತ್ಯನಿಕೇತನ ಸಂಸ್ಥೆ ಸೇರಿದರು. ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಅವರಲ್ಲಿ ನೃತ್ಯಾಭ್ಯಾಸ ಮುಂದುವರೆಸಿದರು. ಕಳೆದ ಐದು ವರ್ಷದಿಂದ ಸಂಸ್ಥೆಯ ನೃತ್ಯ ತಂಡದಲ್ಲಿರುವ ಅವರು ವಿವಿಧ ಸಂದರ್ಭಗಳಲ್ಲಿ ರಾಷ್ಟ್ರೀಯ ಮಟ್ಟದ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಾರೆ. 2022ರಲ್ಲಿ ಭರತನಾಟ್ಯದ ವಿದ್ವತ್ ಪೂರ್ಣಗೊಳಿಸಿದ್ದಾರೆ.
ಉಡುಪಿ ಕೊಡವೂರಿನ ಶಂಕರ ನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಸಂಯೋಜನೆಯಲ್ಲಿ ನಡೆದ `ನೃತ್ಯ ಶಂಕರ’ 63ನೇ ಸರಣಿಯಲ್ಲಿ ಅನಘಾ ಹೆಗಡೆ ಅವರ ನೃತ್ಯ ನೋಡುಗರ ಕಣ್ಮನ ಸೆಳೆದಿದ್ದು, ಚಪ್ಪಾಳೆಯ ಸುರಿಮಳೆಯೊಂದಿಗೆ ಅವರು ವೇದಿಕೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟರು. ವಿಘ್ನ ನಿವಾರಕ ಗಣಪತಿಯನ್ನು ಸ್ಮರಿಸಿ ನಟರಾಜನಿಗೆ ಪುಷ್ಪಾಂಚಲಿ ಅರ್ಪಿಸಿ ನಾಟ್ಯ ಶುರು ಮಾಡಿದ ಅನಘಾ ಹೆಗಡೆ ರಾಗ್ ಸರಸ್ವತಿ ಮತ್ತು ಆದಿ ತಾಳದಲ್ಲಿ ಮಧುರೈ ಆರ್ ಮುರಳೀಧರನ್ ರಚಿಸಿರುವ ಕೃತಿಗೆ ಹೆಜ್ಜೆ ಹಾಕಿದರು.
ವಿಷ್ಣುವಿನ ಮಹಿಮೆ ಸಾರುವ ದಶಾವತಾರ ನೃತ್ಯ, ಶಿವ ತಾಂಡವ ನೃತ್ಯ, ರಾಮಾಯಣ ಕಥೆ ಆಧಾರಿತ ಕನಕದಾಸ ರಚನೆಯ `ಏನೆಂದಳೇನೆoದಳು ನಿನ್ನೊಳು ಸೀತೆ ಹನುಮಯ್ಯ’ ಹಾಡಿಗೆ ನೃತ್ಯ ಮಾಡಿದರು. ದೇವಿಯ ಮಹಿಮೆ ಪ್ರಶಂಸಿಸುವ ರಕ್ತ ಬೀಜಾಸುರನ ಸಂಹಾರ ನೃತ್ಯ ಹಾಗೂ ತಿಲ್ಲಾನದಲ್ಲಿ ರಾಗ ಬೃಂದಾವನೀಯ ಮತ್ತು ಆದಿ ತಾಳದಲ್ಲಿ ಎಂ ಬಾಲಮುರಳೀಕೃಷ್ಣನ್ ಅವರ ಸಂಯೋಜನೆಯ ನೃತ್ಯ ಪ್ರದರ್ಶಿಸಿದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು.