ಅಣಬೆ ತರುವುದಕ್ಕಾಗಿ ಕಾಡಿಗೆ ಹೋಗಿ ದಾರಿತಪ್ಪಿದ ಮಹಿಳೆಯನ್ನು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಅಂಬಿಕಾನಗರದ ಜಮಗಾ ಕಾಲೋನಿಯ ಪಾತಿಮಾ ಮುದಳ ಅಣಬೆ ತರಲು ಕಾಡಿಗೆ ಹೋಗಿದ್ದರು. ಸಂಜೆ 6.30 ಆದರೂ ಅವರು ಮನೆಗೆ ಬಂದಿರಲಿಲ್ಲ. ಅವರ ಬಳಿಯಿದ್ದ ಮೊಬೈಲ್’ಗೆ ಕರೆ ಮಾಡಿದಾಗ ವ್ಯಾಪ್ತಿ ಪ್ರದೇಶದ ಹೊರಗೆ ಎಂಬ ಮಾಹಿತಿ ಬಂದಿತ್ತು. ಈ ಬಗ್ಗೆ ಮನೆಯವರು ಆತಂಕ ವ್ಯಕ್ತಪಡಿಸಿದ ಹಿನ್ನಲೆ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದರು. ಗ್ರಾ ಪಂ ಅಧ್ಯಕ್ಷೆ ಮೇಘಾ ಗೌಡ ಅವರು ಪೊಲೀಸರಿಗೂ ಮನವಿ ಮಾಡಿ ಹುಡುಕಾಟದ ನೆರವು ಕೇಳಿದರು. ಸಂಜೆ 7 ಗಂಟೆ ಅವಧಿಗೆ ಮಹಿಳೆಯ ಮೊಬೈಲ್ ನೆಟ್ವರ್ಕ ಆಧರಿಸಿ ಪೊಲೀಸರು ಕಾಡಿಗೆ ಹೋದರು. ಆದರೆ, ಮೊಬೈಲ್ ನೆಟ್ವರ್ಕ ಕೊನೆಯಾದ ಸ್ಥಳದಲ್ಲಿ ಮಹಿಳೆ ಇರಲಿಲ್ಲ.
ಪೊಲೀಸರು ಮತ್ತೆ ಕುಳಗಿಗೆ ಬಂದು ಪಾತಿಮಾ ಮುದಳ ಬಳಸುತ್ತಿರುವ ಮೊಬೈಲಿನ ಕೊನೆಯ ಲೊಕೇಶನ್ ಹುಡುಕಿದ್ದರು. ಅದು ಕಾಡಿನ ದಾರಿ ತೋರಿಸಿದ್ದು, ಮತ್ತೆ ಅಲ್ಲಿ ಹೋಗಿ ಹುಡುಕಾಟ ನಡೆಸಿದಾಗ ಮಹಿಳೆ ಪತ್ತೆಯಾದರು. ಅರಣ್ಯ ಸಿಬ್ಬಂದಿ ಲಗ್ಮಪ್ಪ ಹಾಗೂ ರಾಮನಗರ ಪಿಎಸ್ಐ ಹುಸೇನ್ ಸಾಬ್ ತಡರಾತ್ರಿಯವರೆಗೂ ಮಹಿಳೆಯ ಹುಡುಕಾಟ ನಡೆಸಿದರು. ರಾತ್ರಿ 11 ಗಂಟೆಗೆ ಪಾತಿಮಾ ಸಿಕ್ಕಿದರು. ವಿಪರೀತ ಗಾಳಿ – ಮಳೆಯಿಂದ ಪಾತಿಮಾ ನಲುಗಿದ್ದು ಮರದ ಬುಡದಲ್ಲಿ ಆಶ್ರಯ ಪಡೆದಿದ್ದರು.
`ಅಣಬೆ ತರಲು ಕಾಡಿಗೆ ಹೋದಾಗ ದಾಟು ಬಳ್ಳಿ ದಾಟಿದ ಪರಿಣಾಮ ದಾರಿ ತಪ್ಪಿದೆ. ಮಳೆ ಇರುವ ಕಾರಣ ಊರಿನ ದಾರಿ ಹುಡುಕಲು ಸಾಧ್ಯವಾಗಿಲ್ಲ’ ಎಂದು ಪಾತಿಮಾ ವಿವರಿಸಿದರು.