ಕಾರವಾರದ ಸತೀಶ್ ಸೈಲ್.. ಯಲ್ಲಾಪುರದ ಶಿವರಾಮ ಹೆಬ್ಬಾರ್.. ಶಿರಸಿಯ ಭೀಮಣ್ಣ ನಾಯ್ಕ ಶಾಸಕರಾಗುವ ಮೊದಲಿನಿಂದಲೂ ಅವರ ಜೊತೆ ಗುರುತಿಸಿಕೊಂಡ ಕೆಲವರಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅವರೆಲ್ಲರೂ ಏನು ಅಲ್ಲ.. ಆದರೆ, ಶಾಸಕರಿಗೆ ಮಾತ್ರ ಎಲ್ಲದಕ್ಕೂ ಅವರೇ ಬೇಕು!
ಅವರೆಲ್ಲ ಸಾಮಾನ್ಯ ಕಾರ್ಯಕರ್ತರಲ್ಲ. ಪ್ರಭಾವಿ ನಾಯಕರಲ್ಲ. ಯಾವುದೇ ಅಧಿಕಾರ ಇದ್ದವರಲ್ಲ. ಪಕ್ಷದಲ್ಲಿಯೂ ಉನ್ನತ ಹುದ್ದೆ ಪಡೆದವರಲ್ಲ. ಶಾಸಕರ ಸಂಬoಧಿರಕಲ್ಲ. ಒಟ್ಟಿಗೆ ಓದಿದವರಲ್ಲ. ಬಾಲ್ಯದ ಸ್ನೇಹಿತರಲ್ಲ. ಒಂದೇ ಜಾತಿ – ಸಮುದಾಯದವರೂ ಅಲ್ಲ. ಅದಾಗಿಯೂ ಅಂಥವರು ಶಾಸಕರಿಗೆ ಆಪ್ತರಾಗಿದ್ದಾರೆ. ಶಾಸಕರ ಜೊತೆಯೇ ಸುತ್ತುತ್ತಾರೆ. ಪ್ರತಿ ವಿಷಯದಲ್ಲಿಯೂ ಶಾಸಕರ ಮುಂದೆ ಅವರ ಅಭಿಪ್ರಾಯ ಮಂಡಿಸುತ್ತಾರೆ. ಸಂಭ್ರಮ ಅಂತಲ್ಲ.. ಸಂಕಷ್ಟ ಬಂದಾಗ ಸಹ ಅವರೆಲ್ಲ ಜನಪ್ರತಿನಿಧಿಗಳ ಜೊತೆಯಿದ್ದಾರೆ!
ಸತೀಶ್ ಸೈಲ್
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸತೀಶ್ ಸೈಲ್ ಜೈಲಿಗೆ ಹೋದಾಗ ಸಹ ಶೆಂಬು ಶೆಟ್ಟಿ ಅವರ ಸಂಪರ್ಕದಲ್ಲಿದ್ದರು. ಸತೀಶ್ ಸೈಲ್ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರೊಡನೆ ಓಡಾಡುತ್ತಿದ್ದರು. ಸತೀಶ್ ಸೈಲ್ ಶಾಸಕರಾದ ನಂತರ ಇನ್ನಷ್ಟು ಜನ ಅವರಿಗೆ ಹತ್ತಿರವಾದರು. ಕೆಲವರು ದೂರವಾದರು. ಆದರೆ, ಶಂಬು ಶೆಟ್ಟಿ ಅವರು ಮಾತ್ರ ಅಂದಿಗೂ – ಇಂದಿಗೂ ಸತೀಶ್ ಸೈಲ್ ಜೊತೆ ಹಾಗೇ ಉಳಿದಿದ್ದಾರೆ.
ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಸತೀಶ್ ಸೈಲ್ ಅವರಿಗೆ ಶಂಬು ಶೆಟ್ಟಿ ಹೇಗೆ ಆಪ್ತರು? ಎಂಬುದು ಈವರೆಗೂ ಹೊರಬರದ ರಹಸ್ಯ!
ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್ ಸಹ ಶಾಸಕರಾಗುವ ಮೊದಲು ಅವರ ಜೊತೆಯಿದ್ದವರು ವಿಜಯ ಮಿರಾಶಿ. ಶಿವರಾಮ ಹೆಬ್ಬಾರ್ ಕಾಂಗ್ರೆಸ್ಸಿನಲ್ಲಿದ್ದಾಗಲೂ ಮಿರಾಶಿ ಅವರ ಜೊತೆಯಿದ್ದರು. ಬಿಜೆಪಿಗೆ ಹೋದಾಗಲೂ ಅವರ ಜೊತೆ ನಿಂತರು. ಪ್ರಸ್ತುತ ಶಿವರಾಮ ಹೆಬ್ಬಾರ್ ಬಿಜೆಪಿ ಹಾಗೂ ಅವರ ಪುತ್ರ ವಿವೇಕ ಹೆಬ್ಬಾರ್ ಕಾಂಗ್ರೆಸ್’ನಲ್ಲಿದ್ದರೂ ವಿಜಯ ಮಿರಾಶಿ ಅವರ ಕುಟುಂಬದವರ ಜೊತೆಯಿದ್ದಾರೆ.
ವಿಜಯ ಮಿರಾಶಿ ಪ್ರತಿ ಚುನಾವಣೆಯಲ್ಲಿಯೂ ಹೆಬ್ಬಾರ್ ಗೆಲುವಿಗೆ ವಿವಿಧ ತಂತ್ರ ರೂಪಿಸುತ್ತಾರೆ. ಶಿವರಾಮ ಹೆಬ್ಬಾರ್ ಅವರು ಎಪಿಎಂಸಿ ಅಧ್ಯಕ್ಷರಾದ ಅವಧಿಯಿಂದಲೂ ವಿಜಯ ಮಿರಾಶಿ ಹೆಬ್ಬಾರ್ ಬೆನ್ನಿಗಿದ್ದಾರೆ. ಶಿವರಾಮ ಹೆಬ್ಬಾರ್ ಮೊದಲ ಬಾರಿ ಶಾಸಕರಾದ ನಂತರ ವಿಜಯ ಮಿರಾಶಿ ಇನ್ನಷ್ಟು ಹತ್ತಿರವಾದರು. ಬಹಿರಂಗವಾಗಿಯೇ `ತಾನೂ ಅವರ ಆಪ್ತ’ ಎಂದು ಕಾಣಿಸಿಕೊಂಡರು. ಶಿವರಾಮ ಹೆಬ್ಬಾರ್ ಅವರಿಗೆ ವಿಜಯ ಮಿರಾಶಿ ಅಷ್ಟೊಂದು ಆಪ್ತರಾಗಿದ್ದು ಹೇಗೆ? ಎಂಬುದು ಇಂದಿಗೂ ಅನೇಕರ ಪಾಲಿಗೆ ದೊಡ್ಡ ಪ್ರಶ್ನೆ!
ಭೀಮಣ್ಣ ನಾಯ್ಕ
ಭೀಮಣ್ಣ ನಾಯ್ಕ ಅವರು ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ಸಿಗೆ ಬಂದಾಗಲಿನಿoದಲೂ ಅವರ ಜೊತೆಯಿದ್ದವರು ಎಸ್ ಕೆ ಭಾಗ್ವತ್. ಭೀಮಣ್ಣ ನಾಯ್ಕ ಅವರು ಸಮಾಜವಾದಿ ಪಕ್ಷದಲ್ಲಿದ್ದಾಗಲೂ ಎಸ್ ಕೆ ಭಾಗ್ವತ್ ಅವರ ಪರಿಚಯಸ್ಥರಾಗಿದ್ದರು. ಆದರೆ, ಅವರು ಕಾಂಗ್ರೆಸ್ ಸೇರಿದ ಮೇಲೆ ಅವರ ಜೊತೆಯೇ ಗಟ್ಟಿಯಾದರು.
ನಿತ್ಯ ಬೆಳಗಾದರೆ ಶಿರಸಿಮಕ್ಕಿ ಕ್ರಾಸಿನಿಂದ ನಡೆದು ಬರುವ ಎಸ್ ಕೆ ಭಾಗ್ವತ ಅವರು ಆಗಾಗ ಅವರಿವರ ಬೈಕಿಗೆ ಕೈ ಮಾಡಿ ಸಾಮ್ರಾಟ್ ಹೊಟೇಲಿಗೆ ಬರುತ್ತಾರೆ. ಅಲ್ಲಿ ಒಂದು ಚಹಾ ಕುಡಿದು ಸುಪ್ರಿಯಾ ಹೊಟೇಲ್ ಪ್ರವೇಶಿಸುವ ಅವರು ಮಧ್ಯಾಹ್ನದ ಊಟಕ್ಕೆ ಮನೆಗೆ ಮರಳುತ್ತಾರೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಸುಪ್ರಿಯಾ ಹೊಟೇಲಿನಲ್ಲಿ ಹಾಜರು!
ಎಸ್ ಕೆ ಭಾಗ್ವತ ಅವರ ಕೆಲಸವೇನು? ಅವರು ಏಕೆ ಹೀಗಿದ್ದಾರೆ? ಶಾಸಕರಿಗೆ ಹಾಗೂ ಅವರ ನಡುವಿನ ಬಾಂಧವ್ಯವೇನು? ಎಂಬುದೆಲ್ಲವೂ ಅವರಿಬ್ಬರಿಗೆ ಮಾತ್ರ ಗೊತ್ತಿರುವ ರಹಸ್ಯ!
ಇನ್ನೂ ಶಾಸಕರಿಗೆ ಆಪ್ತರಾಗಿರುವವರು ಬಹುತೇಕ ಬಾರಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಪದೇ ಪದೇ ದೊಡ್ಡ ದೊಡ್ಡ ಬ್ಯಾನರ್-ಫೋಟೋಗೆ ಪೋಸ್ ಕೊಡುವವರೂ ಅಲ್ಲ. ಆದರೆ, ಶಾಸಕರ ಹಿಂದೆ ಬೀಳುವ ಎಲ್ಲಾ ಹಿಂಬಾಲಕರಿಗಿoತಲೂ ಅವರು ಮುಂದಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳುವಿಕೆ, ತಮಗೆ ಬೇಕಾದವರ ರಕ್ಷಣೆ ಸೇರಿ ಶಾಸಕರಿಂದ ಆಗುವ ಎಲ್ಲಾ ಕೆಲಸಗಳು ಅವರಿಂದ ಸಲೀಸು!
ನೀವು ಹೇಳಿದ್ದು.. ನಾವು ಕೇಳಿದ್ದು!
`ಶಾಸಕರು ಹಾಗೂ ಅವರ ಆಪ್ತರಾಗಿರುವವರ ನಡುವೆ ಕೆಲ ವ್ಯವಹಾರಿಕ ಸಂಬoಧವಿದೆ. ಹೀಗಾಗಿ ಅವರು ಒಟ್ಟಿಗೆ ಇರುತ್ತಾರೆ’ ಎನ್ನುವವರಿದ್ದಾರೆ. `ಶಾಸಕರ ಎಲ್ಲಾ ಗುಟ್ಟು ಅವರಿಗೆ ಗೊತ್ತು. ಹೀಗಾಗಿ ಅವರು ಇವರನ್ನು ಅನಿವಾರ್ಯವಾಗಿ ಜೊತೆಗಿಟ್ಟುಕೊಂಡಿದ್ದಾರೆ’ ಎನ್ನುವವರಿದ್ದಾರೆ. ಆದರೆ, ಇದ್ಯಾವುದಕ್ಕೂ ದಾಖಲೆಗಳಿಲ್ಲ. ಇವರೆಲ್ಲರೂ ಅವರಿಗೆ ಹೇಗೆ ಆಪ್ತರು? ಎಂದು ಅವರವರಿಗೆ ಮಾತ್ರ ಗೊತ್ತಿರುವುದರಿಂದ ಊಹಾಪೋಹದ ಮಾತುಗಳು ಸತ್ಯವಲ್ಲ!