ದಿನದ 24 ಗಂಟೆಯೂ ಬಿಗಿ ಭದ್ರತೆಯಿರುವ ಭಾರತೀಯ ನೌಕಾನೆಲೆಯೊಳಗೆ ಕಳ್ಳತನವಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿಲ್ಲದ ನೌಕಾನೆಲೆಯೊಳಗೆ ಪ್ರವೇಶಿಸಿದ ಕಳ್ಳ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಪೊಲೀಸರಿಗೂ ಸುಲಭವಾಗಿ ಪ್ರವೇಶವಿಲ್ಲದ ಪ್ರದೇಶದಲ್ಲಿನ ಪ್ರಕರಣದ ತನಿಖೆ ತಲೆಬಿಸಿಗೆ ಕಾರಣವಾಗಿದೆ!
ಕಾರವಾರದ ಭಾರತೀಯ ನೌಕಾನೆಲೆಯೊಳಗೆ ರಾಜ್ಯದ ಪೊಲೀಸರಿಗೆ ಸಹ ಅನುಮತಿ ಇಲ್ಲದೇ ಪ್ರವೇಶ ನೀಡುವುದಿಲ್ಲ. ಅನುಮತಿ ಪಡೆದಿದ್ದರೂ ವಿವಿಧ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯ. ಹೀಗೆ ಪ್ರವೇಶಿಸುವ ಪ್ರತಿಯೊಬ್ಬರ ಮೇಲೆಯೂ ಅಲ್ಲಿನ ಭದ್ರತಾ ಸಿಬ್ಬಂದಿ ಕಣ್ಣಿರುತ್ತದೆ. ಜೊತೆಗೆ ಸಿಸಿ ಕ್ಯಾಮರಾಗಳು ಸಹ ಚಲನ-ವಲನ ದಾಖಲಿಸುತ್ತಿರುತ್ತವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪಂಕಜ ಸಿಂಗ್ ಎಂಬಾತರ ಕೋಣೆಗೆ ನುಗ್ಗಿದ ಕಳ್ಳ ಅಲ್ಲಿನ ಸ್ಟಡಿ ಟೇಬಲ್ ಡ್ರಾವರಿನಲ್ಲಿರಿಸಿದ್ದ ಚಿನ್ನಾಭರಣ ದೋಚಿದ ಬಗ್ಗೆ ದೂರು ದಾಖಲಾಗಿದೆ.
ಪಂಕಜ ಸಿಂಗ್ ಅವರ ಪತ್ನಿ ದೀಪಾವಳಿ ಹಬ್ಬದ ವೇಳೆ ಮೈ ತುಂಬಾ ಒಡವೆ ಧರಿಸಿದ್ದರು. ಪೂಜೆ ಮುಗಿದ ನಂತರ ಅದನ್ನು ಬಿಣಗಾದ ಕಾಮತ್ ಗೇಟ್ ಮೂಲಕ ನೌಕಾನೆಲೆಗೆ ತಂದಿದ್ದರು. ಅಲ್ಲಿನ ಕ್ವಾಟರ್ಸ ನಂ 502ರ ಧನಮ್ ಹೆಸರಿನ ಬೆಡ್ ರೂಂ ಒಳಗೆ ಪ್ರವೇಶಿಸಿ ಅಲ್ಲಿದ್ದ ಸ್ಟಡಿ ಟೇಬಲ್ ಒಳಗೆ ಅದನ್ನು ಜೋಪಾನವಾಗಿರಿಸಿದ್ದರು. ಫೆ 2ರಂದು ಆಭರಣಗಳನ್ನು ಅವರು ಕೊನೆಯಾದಾಗಿ ನೋಡಿದ್ದು, ಫೆ 12ರಂದು ಮತ್ತೆ ಅಲ್ಲಿ ನೋಡಿದಾಗ ಚಿನ್ನಾಭರಣಗಳು ಕಾಣಲಿಲ್ಲ.
ಹೀಗಾಗಿ ಒಟ್ಟು 4.83 ಲಕ್ಷ ರೂ ಮೌಲ್ಯದ ಬಗೆ ಬಗೆಯ ಆಭರಣ ಕಾಣೆಯಾಗಿರುವುದಾಗಿ ಪಂಕಜ ಸಿಂಗ್ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.