ಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಕಾಣೆಯಾಗಿದ್ದು, ರಾತ್ರಿ ವೇಳೆ ನೀರಿನ ಆಳದಲ್ಲಿ ಇಬ್ಬರ ಶವ ಸಿಕ್ಕಿದೆ.
ಶಿರಸಿಯ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಇನ್ನೂ ನಾಲ್ಕು ಜನ ಶುಕ್ರವಾರ ಸಿದ್ದಾಪುರಕ್ಕೆ ಬಂದಿದ್ದರು. ಸಂಜೆಯವರೆಗೂ ಸುತ್ತಾಟ ನಡೆಸಿದ ಅವರು ನಿಲ್ಕುಂದ ಬಳಿಯ ವಾಟೆಹೊಳೆ ಜಲಪಾತಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾಗ ಇಬ್ಬರು ನೀರುಪಾಲಾದರು.
ಜಲಪಾತದ ಬಳಿಯಿರುವ ಹೊಂಡದಲ್ಲಿ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಮುಳುಗಿರುವುದನ್ನು ಅವರ ಸ್ನೇಹಿತರು ನೋಡಿದ್ದಾರೆ. ಈ ಹಿನ್ನಲೆ ಅದೇ ಭಾಗದಲ್ಲಿ ಹುಡುಕಾಟ ನಡೆಸಲಾಯಿತು. ಮುಸ್ಸಂಜೆವರೆಗೂ ನಿರಂತರ ಶೋಧ ಕಾರ್ಯಾಚರಣೆ ನಡೆದಿದ್ದು, ನಂತರ ಕತ್ತಲು ಆವರಿಸಿರುವುದರಿಂದ ಹುಡುಕಾಟ ಕಷ್ಟವಾಯಿತು. ಅದಾಗಿಯೂ ನಿರಂತರ ಶೋಧ ನಡೆಸಿದಾಗ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಶವವಾಗಿ ಸಿಕ್ಕಿದ್ದಾರೆ.
ಡಿವೈಎಸ್ಪಿ ಕೆ ಎಲ್ ಗಣೇಶ, ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆಬಿ ಸೀತಾರಾಮ ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾರಿಕಾಂಬಾ ಲೈಫ್ಗಾರ್ಡ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ಮುಳುಗುತಜ್ಞ ಗೋಪಾಲ ಗೌಡ ರಕ್ಷಣಾ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದು, ನೀರು ಪಾಲಾದವರ ಪಾಲಕರು ಹಾಗೂ ಕೆಲ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ.