ಶಿರಸಿ: ನಗರದ ಎಲ್ಲೆಂದರಲ್ಲಿ ಬೀಡಾಡಿ ನಾಯಿಗಳು ಹೆಚ್ಚಾಗಿದ್ದು, ಸಾರ್ವಜನಿಕರ ಮೇಲೆ ಅವು ಆಕ್ರಮಣ ನಡೆಸುತ್ತಿವೆ. ಕೋರ್ಟು – ಕಚೇರಿ ಸುತ್ತಲಿನ ಪ್ರದೇಶದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬೀದಿ ನಾಯಿಗಳಿವೆ. ಬೀಡಾಡಿ ನಾಯಿಗಳ ಆಕ್ರಮಣ ಹೆಚ್ಚಾಗಿದ್ದರೂ ಅವುಗಳ ನಿಯಂತ್ರಣ ಕಾರ್ಯ ನಡೆದಿಲ್ಲ!
ರಾಘವೇಂದ್ರ ಸರ್ಕಲ್’ನಿಂದ ದೇವಿಕೆರೆ ಹೋಗುವ ಕೋರ್ಟ ಹಿಂದಿನ ರಸ್ತೆ ಬದಿಯಲ್ಲಿ ಮಂಗಳವಾರ ನಾಯಿಗಳ ಹಿಂಡು ಕಾಣಿಸಿತು. ನಂತರ ಕೋರ್ಟ ಆವರಣದೊಳಗೆ ಅವು ಪ್ರವೇಶಿಸಿ ಗಲೀಜು ಮಾಡಿದವು. ನಗರಸಭೆ ಆವರಣವೂ ಸೇರಿ ನಗರದ ಹಲವು ಕಚೇರಿಯೊಳಗೆ ನಾಯಿ ಪ್ರವೇಶವಾಗುತ್ತಿದೆ. ಕಚೇರಿ ಕೆಲಸಕ್ಕಾಗಿ ಆಗಮಿಸುವವರ ಮೇಲೆ ನಾಯಿಗಳಿಂದ ಅನಗತ್ಯ ದಾಳಿ ನಡೆಯುತ್ತಿದೆ. ಎಲ್ಲೆಂದರಲ್ಲಿ ಜೊಲ್ಲು ಸುರಿಸುವ ನಾಯಿಗಳಿಂದ ರೋಗ ಹರಡುವಿಕೆಯ ಆತಂಕವೂ ಎದುರಾಗಿದೆ.
ಬೀಡಾಡಿ ಜಾನುವಾರುಗಳ ಕಾಟದಿಂದ ಪದೇ ಪದೇ ಅಪಘಾತಗಳು ನಡೆಯುತ್ತಿದೆ. ನಾಯಿ-ದನಕ್ಕೆ ಗುದ್ದಿ ಗಾಯಗೊಂಡ ಬೈಕ್ ಸವಾರರು ಅನೇಕರಿದ್ದಾರೆ. ಜನರಿಗೆ ಸಾಕಷ್ಟು ತೊಂದರೆ ನೀಡುತ್ತಿರುವ ಈ ಜೀವಿಗಳ ವಿರುದ್ಧ ಹೋರಾಟ ಮಾಡುವವರು ಶಿರಸಿಯಲ್ಲಿಲ್ಲ. ಅಧಿಕಾರಿಗಳು ಸಹ ಬೀಡಾಡಿ ಜೀವಿಗಳ ನಿಯಂತ್ರಣಕ್ಕೆ ಆಸಕ್ತಿವಹಿಸಿಲ್ಲ. ಬೀದಿ ಬೀದಿಯಲ್ಲಿ ಸಂಚರಿಸುವ ನಾಯಿಗಳಂತೂ ಜನರ ಕಾಲಿಗೆ ಬಾಯಿ ಹಾಕುತ್ತಿದ್ದು, ಸಣ್ಣ ಮಕ್ಕಳ ಜೊತೆ ವಾಕಿಂಗ್ ತೆರಳಲು ಜನ ಹೆದರುತ್ತಿದ್ದಾರೆ.
ಈ ನಾಯಿಗಳ ಕಾಟ ಶಿರಸಿ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ಜನರ ಮನೆಗೆ ಬರುವ ನೆಂಟರಿಗೂ ನಾಯಿ ದಾಳಿ ಮಾಡಿದ ಉದಾಹರಣೆಗಳಿವೆ. ಹುಲೆಕಲ್ ಸೋಂದಾ ರಸ್ತೆಯ ಹುತ್ಗಾರ್ ಬಳಿ ಮೊನ್ನೆ ಕಮಲಾ ಹೆಗಡೆ ಅವರು ನಾಯಿ ದಾಳಿಗೆ ಒಳಗಾದರು. ಅವರ ಸೀರೆಯನ್ನು ಬೀದಿ ನಾಯಿ ಹರಿದಿದ್ದು, ಅಂತೂ-ಇoತೂ ಅವರು ನಾಯಿ ಕಚ್ಚಿಸಿಕೊಳ್ಳುವಿಕೆಯಿಂದ ಬಚಾವಾದರು.
ನಾಯಿ ಕಾಟದಿಂದ ಆಗುವ ಸಮಸ್ಯೆಗಳ ಬಗ್ಗೆ ಸಾವಿತ್ರಿ ಭಟ್ಟ ಅವರು ನೀಡಿದ ಪ್ರತ್ಯಕ್ಷ ವರದಿಯ ವಿಡಿಯೋ ಇಲ್ಲಿ ನೋಡಿ..