ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದ ದಿನದ ಒಳಗೆ ಶಿರಸಿ-ಕುಮಟಾ ಹೆದ್ದಾರಿ ಪೂರ್ಣವಾಗುವ ಲಕ್ಷಣ ಕಾಣುತ್ತಿಲ್ಲ. ಕಾರಣ ಈ ರಸ್ತೆ ಅಭಿವೃದ್ಧಿ ಕೆಲಸಕ್ಕಾಗಿ ತರಲಾಗಿದ್ದ ದೊಡ್ಡ ಯಂತ್ರ ಕಳೆದ ಒಂದು ತಿಂಗಳಿನಿoದ ಯಾವ ಕೆಲಸವನ್ನು ಮಾಡಿಲ್ಲ!
ಹಾಳಾದ ಯಂತ್ರವನ್ನು ಸರಿಪಡಿಸಲು ನಾನಾ ಭಾಗದಿಂದ ತಂತ್ರಜ್ಞರು ಬಂದು ಹೋಗಿದ್ದಾರೆ. ಆದರೆ, ಅದನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಯೋಗ್ಯರನ್ನು ಹುಡುಕಿ ಯಂತ್ರ ಸರಿಪಡಿಸುವ ಸಾಹಸಕ್ಕೂ ಗುತ್ತಿಗೆ ಕಂಪನಿ ಆಸಕ್ತಿವಹಿಸಿಲ್ಲ. ಗುತ್ತಿಗೆಪಡೆದ ಕಂಪನಿ ಬಳಿ ಅಗತ್ಯ ಕೆಲಸಗಾರರಿಲ್ಲ. ನುರಿತ ತಜ್ಞರಿಲ್ಲ. ಜೊತೆಗೆ ಬೇಕಾಗಿರುವಷ್ಟು ಪ್ರಮಾಣದಲ್ಲಿ ಯಂತ್ರೋಪಕರಣಗಳು ಸಹ ಇಲ್ಲ. ಹೀಗಾಗಿ ಅಭಿವೃದ್ಧಿಯ ವೇಗ ನಿರಿಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲ.
ಆರಂಭದಲ್ಲಿಯೇ ಮಳೆಗಾಲದ ಕಾರಣದಿಂದ ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಒಂದು ತಿಂಗಳ ಕಾಲ ತಡವಾಯಿತು. ಅದಾದ ನಂತರ ಕೆಲಸಕ್ಕೆ ಅನುಕೂಲವಾಗುವಂತೆ ಭಾರೀ ಪ್ರಮಾಣದ ವಾಹನ ಓಡಾಟ ನಿಷೇಧಿಸಲಾಯಿತು. ರಸ್ತೆ ಅಭಿವೃದ್ಧಿ ಕೆಲಸ ಶುರುವಾದರೂ ಕಾರ್ಮಿಕರ ಕೊರತೆ, ಯಂತ್ರೋಪಕರಣಗಳ ದುರಸ್ತಿ ಸೇರಿ ನಾನಾ ಕಾರಣಗಳಿಂದ ಹೆದ್ದಾರಿ ಅಭಿವೃದ್ಧಿ ತುರುಸಿನಿಂದ ನಡೆಯುತ್ತಿಲ್ಲ.
ಪ್ರಸ್ತುತ ಶಿರಸಿ ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಭಾಗವಾಗಿ ಭಾಗಶಃ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಆದರೆ, ಸರ್ಕಾರದಿಂದ ಎಲ್ಲಾ ಅನುಕೂಲ ಮಾಡಿಕೊಟ್ಟರೂ ಗುತ್ತಿಗೆ ಕಂಪನಿ ಕೆಲಸದ ವೇಗ ಹೆಚ್ಚಿಸಿಲ್ಲ. ಇಷ್ಟು ಮಂದಗತಿಯಲ್ಲಿ ಕೆಲಸ ಮಾಡುವುದಾದರೆ ಹೆದ್ದಾರಿ ಸಂಚಾರ ನಿಷೇಧ ಮಾಡಿಯೂ ಪ್ರಯೋಜನವಿರಲಿಲ್ಲ.
ಶಿರಸಿ-ಕುಮಟಾ ರಸ್ತೆ ಕಾಮಗಾರಿಯ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..