ಅಪಾಯಕಾರಿ ತಿರುವು ಹಾಗೂ ಕಂದಕದಿoದ ಕೂಡಿದ ಶಿರಸಿ-ಕುಮಟಾ ತಡಸ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸರ್ಕಾರ ಆಸಕ್ತಿವಹಿಸಿದೆ. ಅಗಲೀಕರಣದ ವೇಳೆ ರಸ್ತೆ ಅಂಚಿನ ಮರ ಕಟಾವು ಅನಿವಾರ್ಯವಾಗಿದ್ದು, ಇದಕ್ಕೆ ಯಾರಾದರೂ ತಕರಾರು ಸಲ್ಲಿಸುವುದಿದ್ದರೆ ಈಗಲೇ ಸಲ್ಲಿಸಿ ಎಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ!
ಶಿರಸಿ ತಾಲೂಕಿನ ಕುಮಟಾ-ತಡಸ ರಾಷ್ಟ್ರೀಯ ಹೆದ್ದಾರಿ 69ರ 80ಕಿಮೀಯಿಂದ 81.50ರವರೆಗಿನ 1.5 ಕಿಮೀ ಉದ್ದದ ರಸ್ತೆಯ ಅಗಲೀಕರಣ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಸ್ಥಳದಲ್ಲಿ ಎಸ್ ಆಕಾರದ ಕಂದಕಗಳಿರುವುದರಿoದ ರಸ್ತೆ ಅಗಲೀಕರಣ ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆ ಹೇಳಿಕೊಂಡಿದೆ. ಇದರೊಂದಿಗೆ ಅಲ್ಲಲ್ಲಿ ತಿರುವು, ಕಿರಿದಾದ ಸೇತುವೆಗಳಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ರಸ್ತೆ ಅಭಿವೃದ್ಧಿ ವೇಳೆ ಮರ ಕಟಾವು ನಡೆಸುವ ಬಗ್ಗೆ ಶಿರಸಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿoದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ರವಾನೆಯಾಗಿದೆ.
ಈ ಮರ ಕಟಾವಿಗೆ ಅರಣ್ಯ ಇಲಾಖೆ ಸಹ ಆಸಕ್ತಿವಹಿಸಿದೆ. ಅದಾಗಿಯೂ ಮರ ತೆರವುಗೊಳಿಸಲು ಕಾನೂನಿನ ಪ್ರಕಾರ ಸಾರ್ವಜನಿಕರ ಅಭಿಪ್ರಾಯವೂ ಮುಖ್ಯವಾದ ಕಾರಣ ಈ ಪ್ರಕಟಣೆ ಹೊರಡಿಸಲಾಗಿದೆ. `ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ರ ಸೆಕ್ಷನ್ 8ರಪ್ರಕಾರ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕಾಗಿರುವುದರಿಂದ ಮರ ತೆರವುಗೊಳಿಸಲು ತಕರಾರು ಇದ್ದವರು ಅರ್ಜಿ ಸಲ್ಲಿಸಿ’ ಎಂದು ಅರಣ್ಯ ಇಲಾಖೆ ಹೇಳಿಕೊಂಡಿದೆ. ತಕರಾರು ಅರ್ಜಿ ಸಲ್ಲಿಸಲು ಮಾ 5ನೇ ತಾರಿಕು ದಿನ ನಿಗದಿಗೊಳಿಸಲಾಗಿದೆ. ಅಂದು ಬೆಳಗ್ಗೆ 10ಗಂಟೆಯಿoದ ಸಂಜೆ 5.30ರ ಒಳಗೆ ಬನವಾಸಿ ವಲಯ ಅರಣ್ಯಾಧಿಕಾರಿ ಕಚೇರಿಗೆ ಲಿಖಿತವಾಗಿ ತಕರಾರು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.