ಶಿರಸಿ: ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಮಂಗಳವಾರ ಒಂದು ಬಣದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಆದರೆ, ಮೊದಲಿನಿಂದಲೂ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಒತ್ತಾಯಿಸುತ್ತಿದ್ದ ಅನೇಕ ಹೋರಾಟಗಾರರು ಈ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸಿದವರಿಗಿಂತ ಹೆಚ್ಚಿನ ಪ್ರಮಾಣದ ಜನ ಅಲ್ಲಿನ ಕಟ್ಟಡಗಳ ಮೇಲ್ಬಾಗ ನಿಂತು ಮುಂಚೂಣಿಯಲ್ಲಿದ್ದ ಡೊಳ್ಳು ಕುಣಿತವನ್ನು ನೋಡಿ ಅನುಭವಿಸಿದರು.
ಮೆರವಣಿಗೆಯ ಉದ್ದಕ್ಕೂ ಅಲ್ಲಿ ಭಾಗವಹಿಸಿದವರು ಪ್ರತ್ಯೇಕ ಜಿಲ್ಲೆಯ ಅನಿವಾರ್ಯದ ಬಗ್ಗೆ ಫಲಕಗಳನ್ನು ಪ್ರದರ್ಶಿಸಿದರು. `ಕದಂಬ ಕನ್ನಡ’ ಜಿಲ್ಲೆ ಸ್ಥಾಪನೆಗಾಗಿ ಒತ್ತಾಯಿಸಿದರು. ಪ್ರತ್ಯೇಕ ಜಿಲ್ಲೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಪ್ರಮುಖರು ಮಾತನಾಡಿದರು. `ಕದಂಬ ಕನ್ನಡ ಜಿಲ್ಲೆ ಆಗಲೇಬೇಕು’ ಎಂದು ಆಗ್ರಹಿಸಿದರು. ಮಾರಿಕಾಂಬಾ ಸನ್ನಿಧಿಯಲ್ಲಿ ಪೂಜೆ-ಪೂರ್ಣಾಹುತಿ ನಂತರ ಜಾಥಾ ನಡೆದಿದ್ದು, ದೇವಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಹಾಯಕ ಆಯುಕ್ತರ ಕಚೇರಿ ತಲುಪಿತು.
ಮೆರವಣಿಗೆಯಲ್ಲಿ ಭಾಗವಹಿಸಿದವರೆಲ್ಲರೂ ಸೇರಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಸಕ್ತಿವಹಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ರವಾನಿಸಿದರು. ಈ ಮನವಿ ಪತ್ರಕ್ಕೆ ದೇವರ ಪ್ರಸಾದ-ಕುಂಕುಮ ಅಂಟಿಸಿ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ರವಾನಿಸಲಾಯಿತು.