ಒಂದು ವಾರದ ಅವಧಿಯಲ್ಲಿ 8 ಪ್ರವಾಸಿಗರು ಗೋಕರ್ಣದ ಕುಟ್ಲೆ ಕಡಲತೀರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಜೀವ ರಕ್ಷಕ ಸಿಬ್ಬಂದಿ ಅವರನ್ನು ಬದುಕಿಸಿದ್ದಾರೆ. ಆದರೆ, ಈ ರಕ್ಷಣಾ ಸಿಬ್ಬಂದಿ ಬದುಕಿಗೆ ಮಾತ್ರ ಯಾವುದೇ ರಕ್ಷಣೆಗಳಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ತೆರೆದುಕೊಂಡಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರಿಗೆ ಕರಾವಳಿ ಭಾಗದಲ್ಲಿ ಸುರಕ್ಷತೆ, ಮೂಲ ಸೌಕರ್ಯ ಕಾಣುತ್ತಿಲ್ಲ. ಅಲ್ಲಲ್ಲಿ ರಕ್ಷಣಾ ಸಿಬ್ಬಂದಿ ನೇಮಿಸಲಾಗಿದ್ದರೂ ಅವರ ಅಳಲು ಆಲಿಸುವವರಿಲ್ಲ. ಅದಾಗಿಯೂ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣಾ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ರಕ್ಷಿಸುತ್ತಿದ್ದಾರೆ.
ಕುಟ್ಲೆ ಕಡಲತೀರದಲ್ಲಿರುವ ರಕ್ಷಣಾ ಸಿಬ್ಬಂದಿ ಕಳೆದ ಗುರುವಾರದಿಂದ ನಿನ್ನೆಯ ಬುಧವಾರದವರೆಗೆ ಒಟ್ಟು 8 ಜನರ ಜೀವ ಕಾಪಾಡಿದ್ದಾರೆ. ಗುರುವಾರ ವಿದೇಶಿ ವೃದ್ಧೆ ಧನ್ಯ ಎಂಬಾತರು ನೀರು ಪಾಲಾಗಿದ್ದರು. ರಕ್ಷಣಾ ಸಿಬ್ಬಂದಿ ಅವರ ಜೀವ ಉಳಿಸಿದರು. ಅದಾದ ನಂತರ ಗೋವಾದ ಸಾರಂಗ ಹಾಗೂ ಆದಿತ್ಯ ನೀರಿಗೆ ಇಳಿದಿದ್ದು, ಅವರನ್ನು ಅಲ್ಲಿನ ಸಿಬ್ಬಂದಿ ಬದುಕಿಸಿದರು. ಮತ್ತೆ ಮಂಗಳವಾರ ರಷ್ಯಾದ ಇರೀನಾ ಹಾಗೂ ಆನ್ಯ ಕುಡ್ಲೆ ನೀರಿಗೆ ಬಿದ್ದು ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಜೀವರಕ್ಷಕ ಸಿಬ್ಬಂದಿ ಜೀವ ಉಳಿಸಿದರು. ಮರುದಿನ ಬಿಹಾರದ ಪ್ರದೀಪ ಗುಪ್ತ, ಅರ್ಪಿತ್ ಬೆಹೆರಾ ಅದಾದ ನಂತರ ನಿನ್ನೆ ಇಟಲಿಯ ಜಾರ್ಜರನ್ನು ಸಹ ಅಲ್ಲಿನ ಸಿಬ್ಬಂದಿ ರಕ್ಷಿಸಿದರು.
ನಿತ್ಯವೂ ಸಾಹಸದ ಬದುಕು ನಡೆಸುತ್ತಿರುವ ಅಲ್ಲಿನ ರಕ್ಷಣಾ ಸಿಬ್ಬಂದಿಗೆ ಸರ್ಕಾರ ಯಾವ ಸೌಲಭ್ಯವನ್ನು ಕಲ್ಪಿಸಿಲ್ಲ. ಅವರೆಲ್ಲರೂ ಖಾಯಂ ನೌಕರರು ಅಲ್ಲ. ಹೀಗಾಗಿ ರಕ್ಷಣಾ ಸಿಬ್ಬಂದಿಗೆ ಉದ್ಯೋಗ ಭದ್ರತೆಯೂ ಇಲ್ಲ. ಕನಿಷ್ಟ ವೇತನವೂ ಸಿಗಲ್ಲ. ಸರ್ಕಾರ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿಲ್ಲ. ಅದಾಗಿಯೂ ಇರುವ ಸೌಲಭ್ಯಗಳಲ್ಲಿಯೇ ಅಲ್ಲಿನವರು ಪ್ರವಾಸಿಗರ ಜೀವ ಕಾಪಾಡುತ್ತಿದ್ದಾರೆ.
ಅರಬ್ಬಿ ಸಮುದ್ರದ ಅಲೆಗಳ ಅಬ್ಬರ ಎದುರಿಸಿ ಅಪಾಯಕ್ಕೆ ಸಿಲುಕಿದವರ ಜೀವ ಕಾಪಾಡುವ ರಕ್ಷಣಾ ಸಿಬ್ಬಂದಿ ವಿಡಿಯೋ ಇಲ್ಲಿ ನೋಡಿ..