ಶಿರಸಿಯ ಉಂಚಳ್ಳಿ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿದೆ. ನಿಯಮ ಮೀರಿ ಸಾಲ ವಿತರಣೆ, ಸದಸ್ಯರ ಆಸ್ತಿ ಮೌಲ್ಯಕ್ಕೂ ಅಧಿಕ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡಿದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದೆ.
`ನಿಯಮ ಮೀರಿ ಸಾಲ ವಿತರಣೆ ಮಾಡಿರುವುದು ಸಂಘಕ್ಕೆ ಹೊರೆಯಾಗಿದೆ. ಸಾಲ ಸಕಾಲದಲ್ಲಿ ಮರು ಪಾವತಿ ಆಗದೇ ಇದ್ದರೆ ಇನ್ನಷ್ಟು ಸಮಸ್ಯೆ ಎದುರಾಗಲಿದೆ. ಸಂಘವನ್ನು ಉಳಿಸಿಕೊಳ್ಳಲು ಆ ಸಾಲಗಳ ತುರ್ತು ವಸೂಲಾತಿ ಅನಿವಾರ್ಯ’ ಎಂದು ಉಂಚಳ್ಳಿ ಗ್ರಾ ಪಂ ಸದಸ್ಯ ಎಂ ಕೆ ನಾಯ್ಕ ಹೇಳಿದ್ದಾರೆ.
`ರೈತರ ಹಣವನ್ನು ಇಲ್ಲಿ ಬೇಕಾಬಿಟ್ಟಿಯಾಗಿ ನೀಡಲಾಗಿದೆ. 7 ಕೋಟಿಗೂ ಅಧಿಕ ಹಣವನ್ನು ನಿಯಮ ಮೀರಿ ವಿತರಿಸಲಾಗಿದೆ. ಸಂಘವೂ ನಿಯಮ ಉಲ್ಲಂಘಿಸಿದ ಕುರಿತು ನ್ಯಾಯಾಲಯಕ್ಕೆ ದೂರು ನೀಡಲಾಗಿದೆ’ ಎಂದವರು ಹೇಳಿದ್ದಾರೆ.
`ನಿಯಮ ಮೀರಿ ಸಾಲ ನೀಡಿದವರ ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದವರು ಆಗ್ರಹಿಸಿದರು. ಉಂಚಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ, ಸದಸ್ಯ ರವಿತೇಜ ರೆಡ್ಡಿ, ನ್ಯಾಯವಾದಿ ಎಂ ಎನ್ ನಾಯ್ಕ ಈ ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದರು.