ಅವರಿವರ ಮನೆ ಕೂಲಿ ಮಾಡಿ 2 ತೊಲೆ ಬಂಗಾರ ಮಾಡಿಸಿಕೊಂಡಿದ್ದ ಇಡಗಿ ಗೌಡ ಅಂದಾಜು 1 ಲಕ್ಷ ರೂ ಹಣವನ್ನು ಕೂಡಿಟ್ಟಿದ್ದರು. ಆದರೆ, ಆಕೆಯ ಪುತ್ರ ಮಂಜುನಾಥ ಗೌಡ ಅದೆಲ್ಲವನ್ನು ಕಿತ್ತುಕೊಂಡು ಆಕೆಯನ್ನು ಮನೆಯಿಂದ ಹೊರದಬ್ಬಿದ್ದು, ಇಡಗಿ ಗೌಡರಿಗೆ ವೃದ್ಧಾಶ್ರಮವೇ ಆಸರೆಯಾಗಿದೆ.
ಕುಮಟಾದ ಕೂಜಳ್ಳಿಯಲ್ಲಿ ಇಡಗಿ ಗೌಡ 2 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿ ತೋಟ ಮಾಡಿದ್ದರು. ತೋಟ ಆರೈಕೆ ಜೊತೆ ಅವರಿವರ ಮನೆಯಲ್ಲಿ ಕೂಲಿ ಮಾಡಿ ಪುತ್ರ ಮಂಜುನಾಥ ಗೌಡರನ್ನು ಬೆಳೆಸಿದ್ದರು. ಪ್ರಾಯಕ್ಕೆ ಬಂದ ಮಂಜುನಾಥ ಗೌಡರ ಮದುವೆಯನ್ನು ಇಡಗಿ ಗೌಡ ಮಾಡಿಸಿದ್ದರು. ಆದರೆ, ಮದುವೆ ನಂತರ ಮಂಜುನಾಥ ಗೌಡ ಇಡಗಿಯನ್ನು ಮನೆಯಿಂದ ಹೊರ ದಬ್ಬಿದ್ದಾರೆ. ಅಲ್ಲಿಂದ ಮುಂದೆ ಬೆಂಗಳೂರಿಗೆ ಹೋದ ಇಡಗಿ ಗೌಡ ಅಲ್ಲಿ ಕೂಲಿ ಮಾಡಿ ಒಂದಷ್ಟು ಕಾಸು ಸಂಪಾದಿಸಿದ್ದರು. 2 ತೊಲೆ ಬಂಗಾರವನ್ನು ಮಾಡಿಕೊಂಡಿದ್ದರು. ವಯಸ್ಸಾದ ಕಾರಣ ಕುಮಟಾದ ಜಾನಕಿ ವೃದ್ಧಾಶ್ರಮದಲ್ಲಿ ಆಸರೆ ಪಡೆದಿದ್ದರು. ಆಗ ಅಲ್ಲಿಗೆ ಬಂದ ಪುತ್ರ ಮಂಜುನಾಥ ಗೌಡ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದು, ಆಕೆಯ ಬಳಿಯಿದ್ದ ಒಡವೆ ಹಾಗೂ ಹಣ ಕಿತ್ತುಕೊಂಡು ಮತ್ತೆ ಹೊರದಬ್ಬಿದ್ದಾನೆ. 75 ವರ್ಷದ ಇಡಗಿ ಗೌಡ ಇದೀಗ ಬರಿಗೈಯಲ್ಲಿ ವೃದ್ಧಾಶ್ರಮದಲ್ಲಿದ್ದು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ.
ಕಾಡಿಗೆ ಹೋಗಿ ಬದುಕಿದ ವೃದ್ಧೆ
ಮಂಜುನಾಥ ಗೌಡ ಈ ರೀತಿ ವರ್ತಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಸಹ ಆತ ತಾಯಿಯನ್ನು ಮನೆಯಿಂದ ಹೊರ ಹಾಕಿದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆಗ ಪೊಲೀಸರು ಆತನನ್ನು ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದರು. `ತಾಯಿಯನ್ನು ಚನ್ನಾಗಿ ನೋಡಿಕೊಳ್ಳುವೆ’ ಎಂದಿದ್ದ ಆತ ಇದೀಗ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾನೆ. ಆತನ ವರ್ತನೆ ನೋಡಿದ ಇಡಗಿ ಗೌಡ ಸಹ ಮನೆಗೆ ಮರಳಲು ಒಪ್ಪುತ್ತಿಲ್ಲ. `ತಾನು ದುಡಿದ ಹಣ ಹಾಗೂ ಒಡವೆ ನನಗೆ ಬೇಕು’ ಎಂದು ಹಠ ಹಿಡಿದಿರುವ ಇಡಗಿ ಗೌಡ `ವೃದ್ಧಾಶ್ರಮದಲ್ಲಿಯೇ ಬದುಕು ಕಳೆಯುವೆ’ ಎಂದು ಪಟ್ಟು ಹಿಡಿದಿದ್ದಾರೆ. `ಮನೆಯಲ್ಲಿ ಮಲಗಿದ್ದಾಗ ಮಗ-ಸೊಸೆ ಸೇರಿ ಕೊಲೆಗೆ ಯತ್ನಿಸಿದ್ದು, ರಾತ್ರಿ ಕಾಡಿಗೆ ಓಡಿ ಹೋಗಿ ಜೀವ ಉಳಿಸಿಕೊಂಡೆ’ ಎಂದು ಇಡಗಿ ಗೌಡ ಹೇಳಿದ್ದಾರೆ.
ಮಾನವೀಯತೆ ಮೆರೆದ ಪೊಲೀಸರು
ಮಂಜುನಾಥ ಗೌಡ ಮನೆಯಿಂದ ಹೊರ ದಬ್ಬಿದ್ದಾಗ ಇಡಗಿ ಗೌಡರ ಬಳಿ ಒಂದು ಸೀರೆ ಹೊರತುಪಡಿಸಿ ಏನೂ ಇರಲಿಲ್ಲ. ಈ ಹಿಂದೆ ಮಗನೊಂದಿಗೆ ರಾಜಿ ಮಾಡಿಸಿದನ್ನು ನೆನಪು ಮಾಡಿಕೊಂಡ ವೃದ್ಧೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದು, ಆಕೆಯ ಪರಿಸ್ಥಿತಿ ನೋಡಿದ ಅಲ್ಲಿನ ಪೊಲೀಸರು ಒಂದಷ್ಟು ನೆರವು ನೀಡಿದ್ದರು. ಮಹಿಳಾ ಪೊಲೀಸರು ಹಣ ಒಗ್ಗೂಡಿಸಿ ಆಕೆಗೆ ಸೀರೆ ತೆಗಿಸಿಕೊಟ್ಟಿದ್ದರು. `8 ದಿನ ಸಹ ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡಲಿಲ್ಲ. ನಾನು ಮತ್ತೆ ಅಲ್ಲಿ ಹೋಗಲ್ಲ’ ಎಂಬುದು ಅವರ ಅಳಲು. `ಮಗ ನನ್ನನ್ನು ಸಾಕುವುದು ಬೇಡ. ನನ್ನಿಂದ ಕಿತ್ತುಕೊಂಡ ಹಣ ಹಾಗೂ ಬಂಗಾರ ಮರಳಿಸಿದರೆ ಸಾಕು’ ಎಂದು ಇಡಗಿ ಗೌಡ ಕಣ್ಣೀರು ಹಾಕಿದರು.
ಬದುಕಿದ್ದರೂ ಸಾವಿನ ದಾಖಲೆ
75 ವರ್ಷವಾದರೂ ಇಡಗಿ ಗೌಡ ಅವರಿಗೆ ವೃದ್ಧಾಪ್ಯ ವೇತನ ಸಹ ಸಿಗುತ್ತಿಲ್ಲ. ಕಾರಣ ಸರ್ಕಾರಿ ದಾಖಲೆಗಳ ಪ್ರಕಾರ ಅವರು ಸಾವನಪ್ಪಿದ್ದರು! ನಂತರ ಕಚೇರಿ ಅಲೆದಾಟ ನಡೆಸಿ `ತಾನು ಬದುಕಿದ್ದೇನೆ’ ಎಂದು ಅವರು ಸಾಕ್ಷಿ ಹೇಳಿದ್ದು, ಇದೀಗ ಅವರು ಬದುಕಿರುವ ಬಗ್ಗೆ ಸರ್ಕಾರ ಖಚಿತಪಡಿಸಿದೆ. ಆದರೆ, ವೃದ್ಧಾಪ್ಯ ವೇತನದ ಅರ್ಜಿ ಸ್ವೀಕಾರವಾಗಿಲ್ಲ.
ಮಂಜುನಾಥನ ಮಹಾತ್ಮೆ
8 ದಿನಗಳ ಕಾಲ ತಾಯಿಯನ್ನು ಮನೆಯಲ್ಲಿರಿಸಿಕೊಂಡ ಮಂಜುನಾಥ ಆಕೆಗೆ ಸರಿಯಾದ ಊಟವನ್ನು ಹಾಕಿಲ್ಲ. ಈ ಬಗ್ಗೆ ಜಾನಕಿರಾಮ ವೃದ್ಧಾಶ್ರಮದ ಮುಖ್ಯಸ್ಥರು ಪ್ರಶ್ನಿಸಿದಾಗ `ಇಡಗಿ ಗೌಡಗೆ ನಾನು ಹುಟ್ಟಿದ್ದು ಎಂದು ತಂದೆ ದಾಖಲೆ ಕೊಡಲಿ. ಆಗ ಮುಂದಿನದು ನೋಡುವ’ ಎಂದು ಹೇಳಿದ್ದಾನೆ. `ಇಡಗಿ ಗೌಡರ ಪೆಟ್ಟಿಗೆ ಒಡೆದು ಹಣ ಒಡವೆ ಅಪಹರಿಸಿದ ಬಗ್ಗೆ ಪ್ರಶ್ನಿಸಿದಾಗಲೂ ಆತ ಸ್ಪಂದಿಸಿಲ್ಲ’ ಎಂದು ಆಶ್ರಮದ ಆಶಾ ನಾಯ್ಕ ವಿವರಿಸಿದರು.
`ಇದೀಗ ಇಡಗಿ ಗೌಡರ ಆರೋಗ್ಯ ಸರಿಯಿಲ್ಲ. ಅವರನ್ನು ತಾಯಿ ಎಂದು ಭಾವಿಸಿ ನಾನು ಸಲಹುತ್ತಿದ್ದೇನೆ. ಆದರೆ, ಮಾನಸಿಕ ನೆಮ್ಮದಿಗಾಗಿ ಅವರಿಗೆ ಅವರು ಕೂಡಿಟ್ಟ ಹಣ ಹಾಗೂ ಮಾಡಿಸಿಕೊಂಡ ಬಂಗಾರದ ಅಗತ್ಯವಿದೆ’ ಎಂದು ಆಶಾ ನಾಯ್ಕ ಹೇಳಿದರು. ಮೂರು ವರ್ಷದಿಂದ ಹಿಂದೆ ಆಶ್ರಮಕ್ಕೆ ಬಂದು ಉಳಿದು ಮನೆಗೆ ಹೋಗಿದ್ದ ಇಡಗಿ ಗೌಡ ಇದೀಗ ಮತ್ತೆ ಎಲ್ಲವನ್ನು ಕಳೆದುಕೊಂಡು ಆಶ್ರಮ ಸೇರಿದ್ದು, `ಮಗ ಜೀವನಾಂಶ ನೀಡದಿದ್ದರೂ ಬೇಸರವಿಲ್ಲ. ನಾನು ದುಡಿದ ಹಣ ಹಾಗೂ ಬಂಗಾರ ನನಗೆ ಬೇಕು’ ಎಂಬುದೊoದೇ ವೃದ್ಧೆಯ ಬೇಡಿಕೆ.
ಅಜ್ಜಿಗೆ ನೆರವಾದ ಆಗ್ನೇಲ್
ಇಡಗಿ ಗೌಡ ಅವರ ಅಳಲು ಆಲಿಸಿದ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ್ದಾರೆ. `ಹಿರಿಯ ನಾಗರಿಕರು ಜೀವನಾಂಶಕ್ಕೆ ಅರ್ಜಿ ಕೊಟ್ಟರೆ ಅದನ್ನು 3 ತಿಂಗಳ ಒಳಗೆ ಉಪವಿಭಾಗಾಧಿಕಾರಿ ಬಗೆಹರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಮೇಲ್ಮನವಿ ಸ್ವೀಕರಿಸಬೇಕು. ಅಲ್ಲಿ ಸಹ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಮುಖ್ಯಮಂತ್ರಿಗಳ ಟಾಸ್ಕಪೋರ್ಸ ಈ ಪ್ರಕರಣದ ವಿಚಾರಣೆ ನಡೆಸಬೇಕು. ಅಜ್ಜಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು’ ಎಂದು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ರಿಸ್ ಹೇಳಿದ್ದಾರೆ.
ಈ ಹಿಂದೆ ಸಾರ್ವಜನಿಕ ಕೆಲಸ ಮಾಡಿಕೊಡದ ಅಧಿಕಾರಿ ವಿರುದ್ಧ ಜನ ಸಾಮಾನ್ಯರ ಕೇಂದ್ರವೂ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿತ್ತು. `ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ಮತ್ತೆ ದೂರು ದಾಖಲಿಸುವುದು ಅನಿವಾರ್ಯ’ ಎಂದು ಕೇಂದ್ರದವರು ಹೇಳಿದ್ದಾರೆ.
ಇಡಗಿ ಗೌಡ ಅವರು ಅಳಲು ತೋಡಿಕೊಂಡ ವಿಡಿಯೋ ಇಲ್ಲಿ ನೋಡಿ…