ನಡೆದಾಡುವ ದಾರಿ ವಿಷಯವಾಗಿ ಗಲಾಟೆ ಮಾಡಿ ಮಹಿಳೆಗೆ ಕತ್ತಿ ಬೀಸಿದವರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಜಯಂತಿನಗರದ ಹಸೀನಾ ಶೇಖ್ ಹಾಗೂ ಅವರ ಸಂಬoಧಿಕರಾದ ಜಾಫರ್ ಪಟೇಲ್, ಇಮಾಮ್ ಪಟೇಲ್, ಆಶಾಬಿ ಪಟೇಲ್ ಹಾಗೂ ನಗ್ಮಾ ಪಟೇಲ್ ನಡುವೆ ವೈಮನಸ್ಸು ಉಂಟಾಗಿತ್ತು. ಜಾಗದ ವಿಷಯವಾಗಿ ಅವರ ನಡುವೆ ಜಗಳವಾಗಿದ್ದು, ಅದು ಸರಿಯಾಗಿರಲಿಲ್ಲ.
2021ರ ಎಪ್ರಿಲ್ 13ರಂದು ಹಸೀನಾ ಶೇಖ್ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿನ ದಾರಿಯಲ್ಲಿ ಜನರು ತಿರುಗಾಡುತ್ತಿದ್ದರು. ಇದನ್ನು ನಗ್ಮಾ ಪಟೇಲ್ ವಿರೋಧಿಸಿದ್ದರು. ಆಗ, ಹಸೀನಾ ಶೇಖ್ `ಜನರ ತಿರುಗಾಡಲಿ ಬಿಡು’ ಎಂದು ಬುದ್ದಿ ಹೇಳಿದ್ದರು. ಇದರಿಂದ ಸಿಟ್ಟಾದ ನಗ್ಮಾ ಪಟೇಲ್ `ಈ ಜಾಗ ನಮ್ಮದು. ಇಲ್ಲಿ ಯಾರು ತಿರುಗಾಡಬೇಡಿ’ ಎಂದು ಎಚ್ಚರಿಸಿದ್ದರು.
ಇದೇ ವಿಷಯ ದೊಡ್ಡದಾಗಿ ಜಗಳವಾಗಿದ್ದು, ಅಲ್ಲಿಗೆ ಬಂದ ಜಾಫರ್ ಪಟೇಲ್ ಹಸೀನಾ ಶೇಖ್ ಕಡೆ ಮೂರು ಬಾರಿ ಕತ್ತಿ ಬೀಸಿದ್ದರು. ಇಮಾಮ್ ಪಟೇಲ್, ಆಶಾಬಿ ಪಟೇಲ್ ಸಹ ಕೆಟ್ಟದಾಗಿ ನಿಂದಿಸಿದ್ದರು. ಇದನ್ನು ನೋಡಿದ ಅಲ್ಲಿನ ನಾಗೇಂದ್ರ ಹರಿಜನ ಎಂಬಾತರು ಪೊಲೀಸ್ ದೂರು ನೀಡಿದ್ದರು. ಹಸೀನಾ ಶೇಖ್ ಅವರನ್ನು ಕತ್ತಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಶುಕ್ರವಾರ ಶಿಕ್ಷೆ ಪ್ರಕಟಿಸಿದರು.
ಜಾಫರ ಪಟೇಲ್’ಗೆ 10 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ಹಾಗೂ ಆಶಾಬಿ ಪಟೇಲ್’ಗೆ 2 ಸಾವಿರ ರೂ ದಂಡ ವಿಧಿಸಿದರು. ಇನ್ನೊಬ್ಬ ಆರೋಪಿ ಇಮಾಮ್ ಪಟೇಲ್ ಸಾವನಪ್ಪಿದ್ದು, ಬದುಕಿರುವ ಇಬ್ಬರು ಸೇರಿ ಗಾಯಾಳು ಹಸೀನಾ ಶೇಖ್ ಅವರಿಗೆ 10 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಸಂತ್ರಸ್ತರ ಪರವಾಗಿ ರಾಜೇಶ ಮಳಗಿನಕರ್ ವಾದಿಸಿದ್ದರು.