ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಗೇರಿ ಗೆಲ್ಲಲೇ ಇಲ್ಲ. ಇಲ್ಲಿ ಗೆದ್ದಿರುವುದು ಮೋದಿ ಮಾತ್ರ’ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಂಸದ ವಿಶ್ವೇಶ್ವರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು.
ನೆರೆ ಪ್ರವಾಹ ವೀಕ್ಷಣೆಗೆ ಬನವಾಸಿಗೆ ಆಗಮಿಸಿದ್ದ ಅವರು `ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿನ ಸಂಸದ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಅವರು ಮೋದಿ ಹೆಸರಿನಲ್ಲಿ ಮತ ಕೇಳಿದ್ದು, ಸ್ವಂತ ಹೆಸರಿನಲ್ಲಿ ಮತ ಕೇಳುವ ನೈತಿಕತೆಯನ್ನು ಕಾಗೇರಿ ಉಳಿಸಿಕೊಂಡಿಲ್ಲ’ ಎಂದು ಕಿಡಿಕಾರಿದರು. `ಸಂಸದ ಕಾಗೇರಿ ನನ್ನ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ. ನಾನು ರಾಜೀನಾಮೆ ನೀಡಿಯೇ ಚುನಾವಣೆ ಎದುರಿಸಿದವ. ಆಗ, ನನ್ನ ಸ್ವಂತ ಹೆಸರಿನಿಂದ ಆರಿಸಿಬಂದಿದ್ದೇನೆ. ಮತ್ತೆ ಯಾವಾಗ ರಾಜೀನಾಮೆ ಕೊಡಬೇಕು ಎಂದು ನನಗೆ ಗೊತ್ತಿದೆ. ಆಗ ಕೊಡುತ್ತೇನೆ’ ಎಂದರು.
`ಬಿಜೆಪಿಗರೂ ಯಾವ ಪ್ರತಿಭಟನೆಗೂ ನನ್ನ ಕರೆದಿಲ್ಲ. ಅದಕ್ಕಾಗಿ ನಾನು ಹೋಗಿಲ್ಲ. ನಾನು ಹಾಗೂ ಸ್ನೇಹಿತ ಸೋಮಶೇಖರ್ ಬಿಜೆಪಿಯಲ್ಲಿಯೂ ಇಲ್ಲ. ಕಾಂಗ್ರೆಸ್ಸಿನಲ್ಲಿಯೂ ಇಲ್ಲ’ ಎಂದರು.
ಹಗರಣಗಳ ತನಿಖೆ
`ಮೂಡಾ ಹಾಗೂ ವಾಲ್ಮಿಕಿ ಹಗರಣ ತನಿಖೆ ಆಗಲಿದೆ. ತನಿಖೆ ನಂತರ ಸತ್ಯ ಬರಲಿದೆ. ಯಾವ ತನಿಖಾ ಸಂಸ್ಥೆಗಳು ಯಾರ ಕೈಯಲ್ಲಿ ಸಹ ಇಲ್ಲ. ಅದಕ್ಕೂ ಮುನ್ನ ಆರೋಪಿಗಳನ್ನು ಅಪರಾಧಿ ಎಂದು ಕರೆಯುವುದು ಸರಿಯಲ್ಲ’ ಎಂದರು.
Discussion about this post