ಶಿರಸಿ: `ಯಕ್ಷಗೆಜ್ಜೆ’ ತರಬೇತಿ ಕೇಂದ್ರದ ಮಕ್ಕಳು ಕುಣಿಯುವುದು ನೋಡುತ್ತಿದ್ದರೆ ಕಲಾ ರಸಿಕರಿಗೆ ಅದೇ ಚಂದ!
ಯಕ್ಷಗೆಜ್ಜೆ ಬಳಗದವರು ಸತತ ಏಳು ವರ್ಷದಿಂದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ತಿಂಗಳಿಗೆ ಒಮ್ಮೆ ವಿವಿದ ಕಡೆ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಮಕ್ಕಳಲ್ಲಿ ಕಲೆ ಜಾಗೃತಿಗೊಳಿಸುವುದು ಇದರ ಮುಖ್ಯ ಉದ್ದೇಶ. ತಿಂಗಳಿಗೆ ಒಮ್ಮೆ ಮಹಿಳಾ ತಾಳಮದ್ದಲೆಯನ್ನು ಸಹ ಅವರು ಸಂಘಟಿಸುತ್ತಾರೆ. ಚಿಪಗಿ ಜಗನ್ನಾಥೇಶ್ವರ ದೇವಸ್ಥಾನದಲ್ಲಿ `ಶ್ರೀಗಜಾನನ ಜನನ’ ಎಂಬ ಮಕ್ಕಳ ಯಕ್ಷಗಾನ ಗಮನ ಸೆಳೆಯಿತು.
ಸುಬ್ರಾಯ ಕೆರೆಕೊಪ್ಪ ಈ ಯಕ್ಷತಂಡದ ಸಂಯೋಜಕರು. `ಶ್ರೀ ಗಜಾನನ ಜನನ’ ಯಕ್ಷಗಾನದ ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಮಂಜುನಾಥ ಹೆಗಡೆ ಕಂಚೀಮನೆ, ವಿಘ್ನೇಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ ಮೋಹಿತ್ ಭಂಡಾರಿ, ಶ್ರಾವ್ಯಾ, ಅದಿತಿ ಹೆಗಡೆ, ಮಹಿಮಾ ನಾಯ್ಕ, ರಚನಾ ಇದ್ದರು.
ಭಾಗವತಿಕೆಯಲ್ಲಿ ನಿರ್ಮಲಾ ಗೋಳಿಕೊಪ್ಪ, ಮದ್ದಲೆಯಲ್ಲಿ ವಿನಾಯಕ ಹೆಗಡೆ, ಚೆಂಡೆಯಲ್ಲಿ ಕುಮಾರ ಚಂದನ್ ಹೆಗಡೆ ಪ್ರಥಮ ಬಾರಿಗೆ ಗಣಪತಿ ಪೂಜೆ ಹಾಗೂ ಬಾಲಗೋಪಾಲ ವೇಷ ನಡೆಸಿಕೊಟ್ಟರು. ಗೋಪಾಲ ವೇಷದಲ್ಲಿ ಅನೂಷಾ, ಕುಮಾರ ಮನ್ವಿತ್, ಮನಸ್ವಿ ಇದ್ದರು.
ಯಕ್ಷ ಗೆಜ್ಜೆಯ ನಿರ್ಮಲಾ ಹೆಗಡೆ, ಎಂ.ಕೆ.ಹೆಗಡೆ, ಉಪಪ್ರಾಚಾರ್ಯ ಯಜ್ಞೇಶ್ವರ ನಾಯ್ಕ, ಅಧ್ಯಕ್ಷ ಆರ್.ವಿ.ಹೆಗಡೆ ಯಕ್ಷನೃತ್ಯಕ್ಕೆ ಸಾಕ್ಷಿಯಾದರು.
Discussion about this post