ಶಿರಸಿ: `ಅಸಮರ್ಪಕ ಹಾಗೂ ಅವೈಜ್ಞಾನಿಕ ಯೋಜನೆಗಳ ಪರಿಣಾಮ ಗುಡ್ಡಗಾಡುಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಹಾಳಾಗಿದ್ದು, ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ ಉತ್ತರ ಕನ್ನಡವನ್ನು ಪ್ರಕೃತಿ ವಿಕೋಪ ಜಿಲ್ಲೆ ಎಂದು ಘೋಷಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಶಿರಸಿ-ಕುಮಟಾ ರಸ್ತೆಯಲ್ಲಿನ ಭೂಕುಸಿತ ವಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಅಲ್ಲಿನ ಅವಾಂತರಗಳ ಕುರಿತು ಆತಂಕ ವ್ಯಕ್ತಪಡಿಸಿದರು.
`ಜಿಲ್ಲೆಯು ಶೇ.80 ರಷ್ಟು ಭೌಗೋಳಿಕ ಪ್ರದೇಶ ಗುಡ್ಡಗಾಡು, ಕಣಿವೆ, ನದಿ, ಕೊಳ್ಳಗಳು ದಟ್ಟ ಅರಣ್ಯ ಪ್ರದೇಶಗಳಲ್ಲಿವೆ. ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ, ಅಸಮರ್ಪಕ ಕಾಮಗಾರಿಗಳಿಂದ ಪ್ರಕೃತಿ ಮುನಿಸಿಕೊಂಡಿದೆ. ಈ ಹಿಂದೆ ಯಲ್ಲಾಪುರ ಅರಬೈಲ, ಕಳಚೆ, ಜೋಯಿಡಾದ ಅಣಶಿ ಘಾಟ್, ಮುಂಡಗೋಡ ಶಿಡಲಗುಂಡಿ, ಶಿರಸಿ ಮತ್ತಿಘಟ್ಟಾ, ಕಕ್ಕಳ್ಳಿ, ಕುಮಟಾ ತಂಡಾಕುಳಿ, ಸಿದ್ದಾಪುರ ದೊಡ್ಮನೆ ಘಾಟ್, ಹೊನ್ನಾವರ-ಸಾಗರ ರಾಷ್ಟೀಯ ಹೆದ್ದಾರಿ, ಕಾರವಾರದ ಚೆಂಡಿಯಾ, ಅರಗಾ ಮೊದಲಾದ ಕಡೆ ಭೂ ಕುಸಿತ ನಡೆದಿದೆ. ಇದೀಗ ಅದು ಮರುಕಳಿಸಿದ್ದು, ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ’ ಎಂದು ದೂರಿದ್ದಾರೆ.
ಅಪಾರ ಸಂಖ್ಯೆಯ ಜೀವ ಸಂಪತ್ತು, ನಿಸರ್ಗ ನಷ್ಟ ಉಂಟಾಗುತ್ತಿರುವ ಕಾರಣ ಜಿಲ್ಲೆಗೆ ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.






