ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಗೋ ಕಳ್ಳತನ ಎಗ್ಗಿಲ್ಲದೇ ನಡೆಯುತ್ತಿದೆ. ಹಗಲಿನಲ್ಲಿಯೇ ರಾಜಾರೋಷವಾಗಿ ಕಾನೂನುಬಾಹಿರವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ. ಇಂಥ ಪ್ರಕರಣಗಳನ್ನು ಬೆನ್ನತ್ತಿದ ಪೊಲೀಸರು ಕಳೆದ ಐದು ವರ್ಷದ ಅವಧಿಯಲ್ಲಿ ಒಟ್ಟು 900 ಗೋವುಗಳನ್ನು ರಕ್ಷಿಸಿದ್ದಾರೆ!
ಹೊನ್ನಾವರದ ಸಾಲಕೋಡದಲ್ಲಿ ಭಾನುವಾರ ಮೇವಿಗೆ ತೆರಳಿದ ಜಾನುವಾರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕಿತ್ತೆಸೆದು ಮಾಂಸ ಒಯ್ದಿದ್ದು, ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹಾಗೂ ಇನ್ನಿತರ ಅಧಿಕಾರಿಗಳು ದುಷ್ಕರ್ಮಿಗಳ ಜಾಡು ಹಿಡಿದು ಮಂಗಳವಾರ ಕಾಡು ಸುತ್ತಿದ್ದಾರೆ. ಇದರೊಂದಿಗೆ `ಉತ್ತರ ಕನ್ನಡ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಹಾಗೂ ಗೋ ವಧೆಯನ್ನು ಸಹಿಸಲ್ಲ’ ಎಂಬ ಸಂದೇಶ ರವಾನಿಸಿದ್ದಾರೆ.
ಇದಕ್ಕೆ ಸಂಬoಧಿಸಿದoತೆ ಜಿಲ್ಲಾ ಪೊಲೀಸ್ ಘಟಕ ಅಂಕಿ-ಅoಶಗಳನ್ನು ಬಿಡುಗಡೆ ಮಾಡಿದೆ. ಕಳೆದ ಐದು ವರ್ಷದ ಅವಧಿಯಲ್ಲಿ 138 ಅಕ್ರಮ ಗೋ ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗೋ ಕಳ್ಳತನ ನಡೆದ ಬಗ್ಗೆ 23 ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಈ ಅವಧಿಯಲ್ಲಿ 467 ಜನ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರೆಲ್ಲರ ವಿರುದ್ಧ `ಕಠಿಣ ಕ್ರಮ’ ಜರುಗಿಸಲಾಗಿದೆ.
ಹೊನ್ನಾವರದ ಸಾಲ್ಕೋಡಿನಲ್ಲಿ ಪುಣ್ಯಕೋಟಿ ಮೇಲೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳ ಪತ್ತೆಗೆ 6 ತಂಡವನ್ನು ರಚಿಸಲಾಗಿದೆ. ಅನುಮಾನಾಸ್ಪದ ಮೂವರ ವಿಚಾರಣೆ ಮುಂದುವರೆದಿದೆ. ಸ್ಥಳೀಯರನ್ನು ಸಹ ಪೊಲೀಸರು ವಿಶ್ವಾಸಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನೂ `ಅಕ್ರಮ ಗೋ ಸಾಗಾಟ, ಗೋ ವಧೆ ಹಾಗೂ ಕಳ್ಳ ಸಾಗಾಣಿಕೆ ವಿಷಯದ ಬಗ್ಗೆ ಗೊತ್ತಿದ್ದವರು ನೇರವಾಗಿ ನನಗೆ ಫೋನ್ ಮಾಡಿ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ. ಅವರ ಫೋನ್ ನಂ: 9480805201