ಕುಮಟಾ: ಇಲ್ಲಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿ-ಸಿಬ್ಬಂದಿ ಕೊರತೆ ಕಾಡುತ್ತಿದೆ. ಶನಿವಾರ ಬೆಳಗ್ಗೆ ಒಬ್ಬರು ಸಿಬ್ಬಂದಿ ಹೊರತುಪಡಿಸಿ ಇಲ್ಲಿ ಯಾರೂ ಇರಲಿಲ್ಲ. ಸಾರ್ವಜನಿಕ ಕೆಲಸಗಳು ಸಹ ಸರಾಗವಾಗಿ ನಡೆಯಲಿಲ್ಲ.
ಶುಕ್ರವಾರ ಇಡೀ ಕಚೇರಿಯಲ್ಲಿ ಖಾಲಿ ಖುರ್ಚಿಗಳೇ ಹೆಚ್ಚಿಗೆ ಕಾಣಿಸುತ್ತಿದ್ದವು. ವಿವಾಹ ನೊಂದಣಿ ಸೇರಿ ವಿವಿಧ ಕೆಲಸಗಳಿಗೆ ಕಚೇರಿಗೆ ಬಂದವರು ಕೆಲಸವಾಗದ ಕಾರಣ ಮನೆಗೆ ಮರಳಿದರು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಈ ಬಗ್ಗೆ ಉಪನೊಂದಣಾಧಿಕಾರಿ ಶಿವಾನಂದ ಪಾಟೀಲ್ ಅವರಿಗೆ ಫೋನ್ ಮಾಡಿ ವಿಚಾರಿಸಿದರು. `ಕುಮಟಾ ಹಾಗೂ ಹೊನ್ನಾವರ ಕಚೇರಿಗೆ ಒಬ್ಬರೇ ಅಧಿಕಾರಿಯಿದ್ದು, ಎರಡು ದಿನಕ್ಕೊಮ್ಮೆ ಒಂದು ತಾಲೂಕಿಗೆ ಭೇಟಿ ನೀಡಲಾಗುತ್ತಿದೆ’ ಎಂದವರು ತಿಳಿಸಿದರು.
`ಪ್ರಭಾರಿಯಾಗಿ ಕೆಲಸ ನಿರ್ವಹಿಸುವುದರಿಂದ ಈ ರೀತಿ ಮಾಡುವುದು ಅನಿವಾರ್ಯ. ಇದರಿಂದ ಯಾರಿಗೂ ಸಮಸ್ಯೆ ಆಗುತ್ತಿಲ್ಲ’ ಎಂದವರು ಸಮರ್ಥಿಸಿಕೊಂಡರು. `ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು. ಅಗತ್ಯ ಅಧಿಕಾರಿ-ಸಿಬ್ಬಂದಿ ನೇಮಕ ನಡೆಸಬೇಕು’ ಎಂದು ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದರು.