ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಒಳಗೊಂಡ ಬೇಸಿಗೆ ಶಿಬಿರ ಶುರುವಾಗಿದೆ. ಏಪ್ರಿಲ್ 1ರ ಮೊದಲ ದಿನ 25ಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದಾರೆ. ಏಪ್ರಿಲ್ 7ರವರೆಗೂ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.
ಪ್ರೋಪಾತ ಅಕಾಡೆಮಿ ಹಾಗೂ ಸ್ಪೂರ್ಣ ಟ್ಯುಶನ್ ಕ್ಲಾಸಸ್ ಸಹಯೋಗದಲ್ಲಿ ಕಳೆದ ಎಂಟು ವರ್ಷಗಳಿಂದ ಇಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿದೆ. 4 ವರ್ಷದಿಂದ 16 ವರ್ಷದೊಳಗಿನ ಮಕ್ಕಳು ಇಲ್ಲಿ ಪ್ರವೇಶಪಡೆಯುತ್ತಿದ್ದಾರೆ. ಮೊದಲ ದಿನ ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಲಾಯಿತು. ಪರಸ್ಪರ ಪರಿಚಯದ ನಂತರ ಪ್ರಶ್ನೋತರಾವಳಿಗಳನ್ನು ಒಳಗೊಂಡ ಮನರಂಜನಾ ಕಾರ್ಯಕ್ರಮ ನಡೆದಿದ್ದು, ಅದರಲ್ಲಿಯೂ ಶಿಬಿರಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಅದಾದ ಮೇಲೆ ಚಿತ್ರಕಲೆ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಎರಡನೇ ದಿನವಾದ ಮಂಗಳವಾರ ಮೆಹಂದಿ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಮೆಹಂದಿ ಹಾಕುವ ವಿಧಾನಗಳ ಪ್ರಾತ್ಯಕ್ಷಿಕೆ ನಡೆಯಿತು. ನಿತ್ಯವೂ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವ ಬಗ್ಗೆ ತಿಳಿಸಿ, ಯೋಗ ಮಾಡುವ ವಿಧಾನಗಳನ್ನು ತಿಳಿಸಲಾಯಿತು. ರಂಗೋಲಿ ಬಿಡಿಸುವಿಕೆ, ಅಭ್ಯಾಕಸ್ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಶಿಬಿರದ ಮುಖ್ಯಸ್ಥೆ ಜ್ಯೋತಿ ಸಂತೋಷ ನಾಯ್ಕ ಶಿಬಿರವನ್ನು ಉದ್ಘಾಟಿಸಿದರು. ಶಿಕ್ಷಕರಾದ ಸಂಧ್ಯಾ ಭಟ್ಟ, ಲಾವಣ್ಯ ಸಂದೀಪ. ಅಮಯ್ ಖಾನಾಪುರ, ಅನಂತ ಗುನಗಾ, ರೂಪಾ ಪಾಠಣಕರ್, ಸಂಜನಾ ಆಚಾರ್ಯ ವಿವಿಧ ತರಬೇತಿ ನೀಡಿದರು. ಸಂತೋಷ ನಾಯ್ಕ ಶಿಬಿರದ ಮಹತ್ವದ ಬಗ್ಗೆ ಮಾತನಾಡಿದರು. ಐಶ್ವರ್ಯ ಸಂತೋಷ ನಾಯ್ಕ ಕಾರ್ಯಕ್ರಮ ನಿರ್ವಹಿಸಿದ್ದು, ಅಭಿಷೇಕ ಸಂತೋಷ ನಾಯ್ಕ ವಂದಿಸಿದರು.