ಕುಮಟಾ: 16 ವರ್ಷಗಳ ನಂತರ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಭಾನುವಾರ ಗೋಕರ್ಣ ಪ್ರವಾಸ ಮಾಡಿದ್ದಾರೆ. ಈ ಬಾರಿ ಅವರೊಂದಿಗೆ ಆನಂದ ಭೋಧೇಂದ್ರ ಸರಸ್ವತಿ ಸ್ವಾಮೀಜಿ ಸಹ ಆಗಮಿಸಿ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಸ್ವರ್ಣವಲ್ಲಿ ಶ್ರೀಗಳು ಶ್ರೀಕ್ಷೇತ್ರಕ್ಕೆ ಆಗಮಿಸಿದ ಹಿನ್ನಲೆ ಹಬ್ಬದ ವಾತಾವರಣ ಕಾಣಿಸಿತು. ರಥಬೀದಿಯಲ್ಲಿ ಮಾವಿನ ತೋರಣ, ರಂಗೋಲಿಗಳ ಅಲಂಕಾರ ಸ್ವಾಮೀಜಿಯವರನ್ನು ಸ್ವಾಗತಿಸಿತು. ವೇದಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ಭಕ್ತರು ಅವರನ್ನು ಬರಮಾಡಿಕೊಂಡರು. ಮಹಾಬಲೇಶ್ವರ ಮಂದಿರದ ಆತ್ಮಲಿಂಗಕ್ಕೆ ಪಂಚಾಮೃತಾಭಿಷೇಕ ನವಧಾನ್ಯ ರುದ್ರಾಭಿಷೇಕಸಹಿತ ವಿಶೇಷ ಪೂಜೆ ಸಲ್ಲಿಸಿದರು. ಮಂದಿರದ ಅರ್ಚಕ ಗಣಪತಿ ಹಿರೇ, ಶ್ರೀನಿವಾಸ ಅಡಿ, ಶ್ರೀಮಠದ ಪುರೋಹಿತರಾದ ಬಾಲಚಂದ್ರ ದೀಕ್ಷಿತ್, ಪ್ರಭಾಕರ ದೀಕ್ಷಿತ ಪೂಜಾ ಕೈಂಕರ್ಯ ನೆರವೇರಿಸಿದರು
ಮೊದಲು ಶ್ರೀಗಳು ಮಹಾಗಣಪತಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅದಾದ ನಂತರ ಮಹಾಗಣಪತಿ ದೇವಾಲಯಕ್ಕೆ ತೆರಳಿ ಆತ್ಮಲಿಂಗ ದರ್ಶನ ಮಾಡಿದರು. ತಾಮ್ರಗೌರಿ ಸನ್ನಿಧಿಗೂ ಭೇಟಿ ನೀಡಿ ನಮನ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಗಣಪತಿ ಹಿರೇ, ಮಹೇಶ ಹಿರೇಗಂಗೆ, ಸುಬ್ರಹ್ಮಣ್ಯ ಅಡಿ, ಪರಮೇಶ್ವರ ರಮಣಿಪ್ರಸಾದ ಯತಿದ್ವಯರಿಗೆ ಫಲ ಸಮರ್ಪಿಸಿದರು. ಮಠದ ಪುರೋಹಿತರಾದ ಅಗ್ನಿಹೋತ್ರಿ ಬಾಲಚಂದ್ರ ದೀಕ್ಷಿತ್ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು.ದೀಕ್ಷಿತ ಕುಟುಂಬದವರು ಫಲ ಸಮರ್ಪಿಸಿ ಆರ್ಶೀವಾದ ಪಡೆದರು.
ಈ ವೇಳೆ ಮಂದಿರದ ಅರ್ಚಕ ವೃಂದ, ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿಗಳು, ಊರಿನ ವೇದವಿದ್ವಾಂಸರು ಹಾಗೂ ಭಕ್ತವೃಂದವರು ಉಪಸ್ಥಿತರಿದ್ದರು.