ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಮುಂಬಡ್ತಿ ಪಡೆದು ಉಪನಿರ್ದೇಶಕರಾಗುವ ಕನಸು ಕಂಡಿದ್ದ ಅಂಕೋಲಾದ ಶ್ಯಾಮಲಾ ನಾಯಕ ಅವರಿಗೆ ಶಿಕ್ಷಣ ಇಲಾಖೆ ಹಿಂಬಡ್ತಿಯ ಶಿಕ್ಷೆ (Punishment) ನೀಡಿದೆ. ಹೀಗಾಗಿ ಅವರು ಇದೀಗ ಶಾಲಾ ಶಿಕ್ಷಕಿಯಾಗಿದ್ದಾರೆ!
ಅಕ್ಷರ ದಾಸೋಹ ಯೋಜನೆ ಅಡಿ ಏಫ್ರಾನ್ ಪೂರೈಕೆಯಲ್ಲಿನ ಅವ್ಯವಹಾರ, ಪತ್ರಕರ್ತರ ಹೆಸರಿನಲ್ಲಿ ಲಂಚ ಸ್ವೀಕಾರ, ಅಧೀನ ನೌಕರರ ವಿರುದ್ಧ ದ್ವೇಷ ಹಾಗೂ ಹಗೆತನ ಸಾಧಿಸುವಿಕೆ, ದುರಾಡಳಿತ, ಭ್ರಷ್ಟಾಚಾರ ಸೇರಿ 17 ಪ್ರಕರಣಗಳ ಬಗ್ಗೆ ಅವರ ವಿರುದ್ಧ ವಿಚಾರಣೆ ನಡೆದಿತ್ತು. ಮೊಗಟಾ ಬೋರಳ್ಳಿಯ ಕಟಗಿದೇವ ಮಾಧ್ಯಮಿಕ ಶಾಲೆ ಮಾನ್ಯತೆ ನವೀಕರಣದಲ್ಲಿನ ಲೋಪ ಎಸಗಿರುವ ಬಗ್ಗೆ ಶಾಲಾ ಅಧ್ಯಕ್ಷ ಹೊನ್ನಪ್ಪ ನಾಯಕ ದೂರಿದ್ದರು. ಶಿರೂರು ಶಾಲೆಗೆ ಸಂಬoಧಿಸಿ ನಿಮಯಗಳನ್ನು ಮೀರಿ ಸುತ್ತೋಲೆಗಳನ್ನು ಉಲ್ಲಂಘಿಸಿರುವ ಬಗ್ಗೆ ಶಿಕ್ಷಕಿ ಪ್ರೇಮಾಬಾಯಿ ನಾಯಕ ಆರೋಪಿಸಿದ್ದರು. ಅಂಕೊಲಾ ಮಂಜುಗಣಿಯಲ್ಲಿರುವ ರಾಜೇಶ್ವರಿ ವಿದ್ಯಾ ಸಂಸ್ಥೆಯ ಗುರುದಾಸ ಪ್ರೌಢಶಾಲೆ ಮುಖ್ಯಾಧ್ಯಾಪಕ ಮಂಜುನಾಥ ನಾಯ್ಕ ತಮ್ಮ ವೇತನ ತಡೆಹಿಡಿದಿರುವ ಬಗ್ಗೆ ದೂರು ನೀಡಿದ್ದರು. ಶ್ಯಾಮಲಾ ನಾಯ್ಕ ಅವರು ಅಕ್ಷರ ದಾಸೋಹ ಅಧಿಕಾರಿಯಾಗಿದ್ದಾಗ ಏಪ್ರಾನ್ ವಿಷಯದಲ್ಲಿ ಅಕ್ರಮ ನಡೆಸಿರುವ ಬಗ್ಗೆ ಸಡಗೇರಿಯ ವೆಂಕಟ್ರಮಣ ಮುರ್ಕುಂಡಿ ನಾಯಕ ಸಚಿವರಿಗೆ ಪತ್ರ ಬರೆದಿದ್ದರು. ಸರ್ಕಾರಿ ವಾಹನ ದುರುಪಯೋಗದ ಬಗ್ಗೆ ಸಹ ಅವರು ದೂರಿದ್ದರು.
ಅಗಸೂರಿನ ಕೆಪಿಎಸ್ ಪ್ರೌಢಶಾಲೆಗೆ ಹೋಗಿ ಅಲ್ಲಿನ ಶಿಕ್ಷಕಿ ಭವಾನಿ ನಾಯ್ಕ ಅವರಿಗೆ ನಿಂದಿಸಿ ಹಗೆತನ ಸಾಧಿಸಿದ ಬಗ್ಗೆ ಅವರು ಇಲಾಖೆಗೆ ದೂರು ನೀಡಿದ್ದರು. ಸಮನ್ವಯಾಧಿಕಾರಿ ಹರ್ಷಿತಾ ಸುಧೀರ ನಾಯಕ ಸಹ ತಮ್ಮ ಮೇಲೆ ಶ್ಯಾಮಲಾ ನಾಯ್ಕ ಅನಗತ್ಯ ದ್ವೇಷ ಹೊಂದಿರುವ ಬಗ್ಗೆ ಆರೋಪಿಸಿದ್ದರು. ಸಕಲಬೇಣ ಶಿಕ್ಷಕ ಶೇಖರ ಗಾಂವಕಾರ್ ಅವರಿಗೆ ಸಹ ತಮಗೆ ಶ್ಯಾಮಲಾ ನಾಯಕ ಅವರಿಂದ ಅನಗತ್ಯ ಕಿರುಕುಳ ಆಗುತ್ತಿರುವ ಬಗ್ಗೆ ಇಲಾಖೆಗೆ ದೂರು ನೀಡಿದ್ದರು. ಇದಲ್ಲದೇ, ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಗೆ ಹೊಡೆದ ಪ್ರಕರಣದಲ್ಲಿ ಮಾಧ್ಯಮದಲ್ಲಿ ವರದಿ ಪ್ರಕಟವಾದಂತೆ ನೋಡಿಕೊಳ್ಳುವುದಾಗಿ ತಿಳಿಸಿ ಶ್ಯಾಮಲಾ ನಾಯಕ ಶಿಕ್ಷಕಿಯಿಂದ 6 ಸಾವಿರ ರೂ ಪಡೆದ ಆರೋಪವಿದ್ದು, ಅದಾದ ನಂತರವೂ ಮಾಧ್ಯಮ ವರದಿ ಪ್ರಕಟವಾಗಿತ್ತು!
ಸಿಆರ್ಪಿಗಳ ವಿರುದ್ಧ ಕೂಗಾಡುವುದು, ದ್ವೇಷ ಸಾಧನೆ ಜೊತೆಗೆ ಹೆಚ್ಚುವರಿ ಶಿಕ್ಷಕರಿಗೆ ಕೆಲಸ ನೀಡದೇ ವೇತನ ಪಾವತಿಸಿ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟ ಮಾಡಿದ ಆರೋಪ ವ್ಯಕ್ತವಾಗಿತ್ತು. ಅನುದಾನ ಬಿಡುಗಡೆ ಮಾಡುವಾಗ ಕಮಿಶನ್ ಪಡೆದಿರುವುದು, ವಿಜ್ಞಾನ ಹಬ್ಬಕ್ಕೆ ಬಿಡುಗಡೆಯಾದ ಹಣ ದುರುಪಯೋಗ, ಶಿಕ್ಷಕರ ವೇತನ ಪಾವತಿ ವಿಷಯದಲ್ಲಿ ತೊಂದರೆ, ರಜೆ ನೀಡುವ ವಿಷಯದಲ್ಲಿ ಅನ್ಯಾಯ ಹಾಗೂ ಶಿಕ್ಷಕ ಸಂಘದ ಸದಸ್ಯರಿಗೆ ಅಗೌರವ ಸೇರಿ ಒಟ್ಟು 17 ದೂರುಗಳ ಹಿನ್ನಲೆ ಅಮಾನಾತಾಗಿದ್ದರು. ಹೀಗಾಗಿ 3 ವರ್ಷದಿಂದ ಹಾಜರಾಗಿರಲಿಲ್ಲ. ಈ ಅವಧಿಯಲ್ಲಿ ನಿವೃತ್ತ ನ್ಯಾಯಾಧೀಶ ಸಂಗಪ್ಪ ಹುಚ್ಚಪ್ಪ ಮಿಟ್ಟಲ್ಕೋಡ್ ಅವರ ಮೂಲಕ ಎಲ್ಲಾ ವಿಚಾರಣೆ ನಡೆದಿತ್ತು. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಶ್ಯಾಮಲಾ ನಾಯಕ ಅಲ್ಲಗಳೆದಿದ್ದರು. ಆದರೆ, ವಿಚಾರಣಾಧಿಕಾರಿಗಳು ಇದನ್ನು ಒಪ್ಪಿರಲಿಲ್ಲ.
ಶಾಂತಿಕಾ ಪರಮೇಶ್ವರಿ ವಿದ್ಯಾವರ್ಧಕ ಶಾಲೆ ನವೀಕರಣದಲ್ಲಿನ ಲೋಪ, ಅನಗತ್ಯ ತೊಂದರೆ ಮಾಡಿರುವಿಕೆ, ಮಂಜುನಾಥ ನಾಯ್ಕ ಅವರ ವೇತನ ಪಾವತಿಗೆ ತಡೆ ಒಡ್ಡಿರುವುದು, ಕಟಗದೇವ ಪ್ರೌಢಶಾಲೆ ಅಧ್ಯಕ್ಷರಿಗೆ ಅವಮಾನ ಮಾಡಿರುವುದು, ಅಧೀನ ಸಿಬ್ಬಂದಿ ಜೊತೆ ಹಗೆತನ ಸಾಧಿಸಿರುವುದು ಹಾಗೂ ಶಿರೂರು ಪ್ರಕರಣಕ್ಕೆ ಸಂಬoಧಿಸಿ ಪ್ರೇಮಾಬಾಯಿ ನಾಯಕ ಅವರನ್ನು ನಿಯಮಬಾಹಿರವಾಗಿ ನಿಯೋಜನೆ ಮಾಡಿರುವುದು ವಿಚಾರಣೆಯಲ್ಲಿ ಸಾಭೀತಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಣಾಧಿಕಾರಿಯಾಗಿದ್ದ ಅವರನ್ನು ಪ್ರೌಢಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಹಿಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.
Discussion about this post